Advertisement

ಬಿಎಸ್‌ವೈ ಸರ್ಕಾರ ಅಸ್ಥಿರಗೊಳಿಸಲು ಯತ್ನ

09:58 PM Dec 20, 2019 | Team Udayavani |

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ನೆಪದಲ್ಲಿ ರಾಜ್ಯದಲ್ಲಿ ಗಲಭೆ ಸೃಷ್ಟಿಸಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಸ್ಥಿರಗೊಳಿಸಿ, ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಹುನ್ನಾರ ನಡೆಸಿದೆ ಎಂದು ಸಂಸದ ಪ್ರತಾಪ್‌ ಸಿಂಹ ಆರೋಪಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ಥಾನಗಳಲ್ಲಿ ತುಳಿತಕ್ಕೊಳಗಾಗಿರುವವರಿಗೆ ಆಶ್ರಯ ಕೊಡಲಿಕ್ಕೆ ಹೊರತು, ಇಲ್ಲಿರುವವರನ್ನು ನೀವು ಭಾರತೀಯರೇ ಎಂದು ಸಾಬೀತು ಮಾಡಿ ಎಂದು ಕೇಂದ್ರ ಸರ್ಕಾರ ಕೇಳಲು ಅಲ್ಲ ಎಂದು ಸ್ಪಷ್ಟಪಡಿಸಿದರು.

ಗಲಭೆ ಹಿಂದಿದೆ ಕಾಂಗ್ರೆಸ್‌ ಪಾತ್ರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ಹೆಸರಲ್ಲಿ ರಾಜ್ಯಾದ್ಯಂತ ಗಲಭೆಯ ವಾತಾವರಣ ಸೃಷ್ಟಿಯಾಗಿದೆ. ಮಂಗಳೂರಿನಲ್ಲಿ ಅಹಿತಕರ ಘಟನೆ ನಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು, ಮೈಸೂರಿನಲ್ಲೂ ನಿಷೇಧಾಜ್ಞೆ ಉಲ್ಲಂ ಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಮಾಡುವ ವ್ಯವಸ್ಥಿತಿ ಹುನ್ನಾರ ನಡೆಯುತ್ತಿದೆ. ಮೈಸೂರಿನಲ್ಲಿ ಎಸ್‌ಡಿಪಿಐ ಗಲಭೆ ಸೃಷ್ಟಿಸುವ ತಂತ್ರ ನಡೆಸುತ್ತಿದೆ. ಈ ಮೂಲಕ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಿ, ಜನರಲ್ಲಿ ಭಯದ ವಾತಾವರಣ ಉಂಟು ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದ ಹಿಂದೆ ಕಾಂಗ್ರೆಸ್‌ ಇದೆ ಎಂದು ದೂರಿದರು.

ಹಿಂಬಾಗಿಲಿನಿಂದ ಅಧಿಕಾರಕ್ಕೇರಲು ಯತ್ನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಒಳ್ಳೆಯ ಸರ್ಕಾರ ಕೊಡುತ್ತಿದೆ. ಚುನಾವಣೆಗೆ ಇನ್ನೂ ಮೂರುವರೆ ವರ್ಷ ಇರುವುದರಿಂದ ಹಿಂಬಾಗಿಲ ಮೂಲಕ ಹೇಗಾದರೂ ಅಧಿಕಾರಕ್ಕೆ ಬರುವ ಸಲುವಾಗಿ ಕಾಂಗ್ರೆಸ್‌, ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸಿದೆ. ಅಲ್ಪಸಂಖ್ಯಾತ ಮುಸ್ಲಿಮವರು ಇನ್ನಾದರೂ ಕಾಂಗ್ರೆಸ್‌ನವರ ಮಾತು ಕೇಳದೆ ಮುಖ್ಯವಾಹಿನಿಗೆ ಬನ್ನಿ,

ಪೌರತ್ವ ತಿದ್ದುಪಡಿ ಕಾಯ್ದೆಗೂ ಭಾರತದ ಮುಸ್ಲಿಮರಿಗೂ ಏನೇನೂ ಸಂಬಂಧವಿಲ್ಲ ಎಂದು ಹೇಳಿದರು. 1947ರಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಮಾಡಿದ ಕಾಂಗ್ರೆಸ್ಸಿಗರು. ಇಂದು ರಾಜಕೀಯವಾಗಿ ಅಸ್ತಿತ್ವ ಕಳೆದುಕೊಂಡಿದ್ದು, ಮತ್ತೆ ಧರ್ಮದ ಆಧಾರದ ಮೇಲೆ ದೇಶ ಒಡೆಯಲು ಹೊರಟಿದ್ದಾರೆ. ಅಂದು ಕಾಂಗ್ರೆಸ್ಸಿಗರು ಧರ್ಮದ ಆಧಾರದಲ್ಲಿ ದೇಶ ವಿಭಜನೆ ಮಾಡದಿದ್ದರೆ, ಇಂದು ಈ ತಿದ್ದುಪಡಿ ಕಾಯ್ದೆ ಜಾರಿಗೆ ತರಬೇಕಾದ ಅಗತ್ಯವಿರಲಿಲ್ಲ ಎಂದರು.

Advertisement

ಯಡಿಯೂರಪ್ಪ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸದುದ್ದೇಶದಿಂದ ನಿಷೇಧಾಜ್ಞೆ ಜಾರಿ ಮಾಡಿದೆ. ಹೀಗಾಗಿ ಯಾರು ಕೂಡ ನಿಷೇಧಾಜ್ಞೆ ಉಲ್ಲಂಘನೆ ಮಾಡಬೇಡಿ. ನಿಷೇಧಾಜ್ಞೆ ಉಲ್ಲಂ ಸುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ರಾಜೇಂದ್ರ, ಮೈಸೂರು ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್‌, ಮುಖಂಡರಾದ ಹೇಮಂತಕುಮಾರ್‌ ಗೌಡ, ಗಿರಿಧರ್‌, ಪುಟ್ಟಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಾಣ ಹಾನಿಗೆ ಖಾದರ್‌ ಕಾರಣ: ಮಾಜಿ ಸಚಿವ ಯು.ಟಿ.ಖಾದರ್‌ ಚಿತಾವಣೆಯಿಂದಾಗಿ ಮಂಗಳೂರಲ್ಲಿ ಇಬ್ಬರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಕಾಂಗ್ರೆಸ್‌ಗೆ ರಾಜ್ಯದ ಕಾನೂನು-ಸುವ್ಯವಸ್ಥೆ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, ಖಾದರ್‌ ಹೇಳಿಕೆ ಖಂಡಿಸಿ, ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕಿತ್ತು. ಜತೆಗೆ ಘಟನೆ ಬಗ್ಗೆ ಕಾಂಗ್ರೆಸ್‌ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಬೇಡಿಕೆ ಏನು?: ಟಿಬೆಟಿಯನ್ನರು, ಯಹೂದಿಗಳಿಗೆಲ್ಲ ಭಾರತದಲ್ಲಿ ಆಶ್ರಯ ಕೊಟ್ಟಿದ್ದೇವೆ. ಬಾಂಗ್ಲಾ ದೇಶದಲ್ಲಿ ಶೇ.24ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.8.5ಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ಶೇ.15ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.1.6ಕ್ಕೆ ಇಳಿದಿದೆ. ಅಲ್ಲಿ ಅವರು ತೂಗುಗತ್ತಿಯ ಕೆಳಗೆ ಬದುಕುವುದು ಬೇಡ. ಶಾಶ್ವತ ನೆಲೆ ಕಲ್ಪಿಸಬೇಕೆಂದು ಮೋದಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂತಿದೆ. ಆ ದೇಶಗಳಲ್ಲಿ ಲೂಟಿ, ಅತ್ಯಾಚಾರಕ್ಕೊಳಗಾದವರಿಗೆ ಭಾರತದಲ್ಲಿ ಆಶ್ರಯ ಕೊಡುವುದು ಬೇಡವಾ? ಕಾಂಗ್ರೆಸ್‌ ಬೇಡಿಕೆ ಏನು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next