ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಜೋಡಣೆ ಕುರಿತು ಕೇಳಿದ ಪ್ರಶ್ನೆಗೆ ಗರಂ ಆದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಮರ್ಪಕ ಉತ್ತರ ನೀಡದೇ ಸುದ್ದಿಗೋಷ್ಠಿ ಮೊಟಕುಗೊಳಿಸಿ ಎದ್ದು ಹೋದ ಘಟನೆ ನಡೆಯಿತು.
ಮಹದಾಯಿ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಯನ್ನು ಕಡೆಗಣಿಸಿಲ್ಲ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ತನ್ನ ಕರ್ತವ್ಯ ನಿಭಾಯಿಸುವಲ್ಲಿ ವಿಫಲಗೊಂಡಿದೆ ಎಂದರು.
ಯಡಿಯೂರಪ್ಪ ಹೇಳಿಕೆಯಿಂದ ಸಂತುಷ್ಟರಾಗದ ಪತ್ರಕರ್ತರು, “ನೀವು ಗೋವಾ ಮುಖ್ಯಮಂತ್ರಿ ಪತ್ರ ತಂದು ತೋರಿಸಿದ್ದೀರಿ. ಈಗ ವಿಷಯ ಏನಾಯಿತು’ ಎಂದು ಕೇಳಲಾರಂಭಿಸುತ್ತಿದ್ದಂತೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಅವರನ್ನು ಸಮರ್ಥನೆ ಮಾಡಿಕೊಳ್ಳಲು ರಾಜ್ಯ ಸರ್ಕಾರದ ಕ್ರಮ ಖಂಡಿಸಿದರು.
“ಕೇಂದ್ರ ಸರ್ಕಾರ ಸಹಕಾರ ನೀಡಲು ಸಿದ್ಧವಿದೆ. ರಾಜ್ಯ ಸರ್ಕಾರಕ್ಕೆ ಮಹದಾಯಿ ಸಮಸ್ಯೆ ಇತ್ಯರ್ಥಗೊಳಿಸುವ ಇಚ್ಛಾಶಕ್ತಿಯಿಲ್ಲ’ ಎಂದಷ್ಟೇ ಹೇಳಿ ಎದ್ದು ಹೊರಡಲು ಅನುವಾದರು. ವಿಪಕ್ಷವಾಗಿ ಬಿಜೆಪಿ ಹೋರಾಟ ಮಾಡುವಲ್ಲಿ ವಿಫಲವಾಗಿದೆ ಎಂದು ಪತ್ರಕರ್ತರು ಹೇಳುತ್ತಿದ್ದಂತೆಯೇ ಸಿಟ್ಟಾದ ಬಸವರಾಜ ಬೊಮ್ಮಾಯಿ, “ನೀವು ಪತ್ರಕರ್ತರು ಮುಖ್ಯಮಂತ್ರಿಗೆ ಪ್ರಶ್ನೆ ಕೇಳಬೇಕೇ ಹೊರತು ನಮಗೆ ಕೇಳಬಾರದು.
ಮಹದಾಯಿ ಕುರಿತು ಯಾವುದೇ ಚರ್ಚೆ ನಡೆದರೂ ನಾನು ಬರಲು ಸಿದ್ಧನಿದ್ದೇನೆ. ಯಾವುದೋ ಉದ್ದೇಶ ಇಟ್ಟುಕೊಂಡು ಬರುವ ಕೆಲ ಪತ್ರಕರ್ತರು ವಿಷಯಾಂತರ ಮಾಡುತ್ತಾರೆ’ ಎಂದು ಹೇಳಿ ನಿರ್ಗಮಿಸಿದರು. ಶಾಸಕ ಸಿ.ಸಿ.ಪಾಟೀಲ ಕೂಡ ಪತ್ರಕರ್ತರ ಮೇಲೆ ಹರಿಹಾಯ್ದರು. ಆಡಳಿತ ಪಕ್ಷದವರಿಗೆ ಕೇಳುವ ಪ್ರಶ್ನೆಗಳನ್ನು ನಮಗೇಕೆ ಕೇಳುತ್ತೀರಿ ಎಂದು ಸಿಟ್ಟು ಮಾಡಿಕೊಂಡು ಹೋದರು.