ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ನನ್ನ ಬಾಯಿಂದ ಯಾಕೆ ಅದನ್ನು ಹೇಳಿಸುತ್ತೀರಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ವರ್ಗಾವಣೆ ದಂಧೆಗೆ ಮುಖ್ಯಮಂತ್ರಿಗಳು ತಮ್ಮ ಪುತ್ರನನ್ನು ಬಿಟ್ಟಿದ್ದಾರೆ ಎಂಬುದಾಗಿ ಕುಮಾರಸ್ವಾಮಿ ಆರೋಪಕ್ಕೆ ಸೋಮವಾರ ತಮ್ಮ ನಿವಾಸದ ಬಳಿ ಪತ್ರಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರಿಗೆ ದೇವರು ಒಳ್ಳೆಯದು ಮಾಡಲಿ. ಅವರು ಅಧಿಕಾರಲ್ಲಿದ್ದಾಗ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ರಾಜ್ಯ ಬಿಜೆಪಿ ಯುವ ಮೋಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಎಚ್‌ಡಿಕೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, “ಕುಮಾರಸ್ವಾಮಿ ವಿನಾಕಾರಣ ನಮ್ಮ ಮೇಲೆ ವರ್ಗಾವಣೆ ದಂಧೆಯ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಅವರ ಇಡೀ ಕುಟುಂಬ ವರ್ಗಾವಣೆ ದಂಧೆಯಲ್ಲಿ ತೊಡಗಿತ್ತು. ಲೋಕೋಪಯೋಗಿ ಇಲಾಖೆಯ 700 ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಿದ್ದರು ಎಂದು ಹೇಳಿದರು.
ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರಿಂದ ಕುಮಾರಸ್ವಾಮಿಯವರಿಗೆ ಆತಂಕವಾಗಿದೆ. ಹಾಗಾಗಿ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಅವರು “ಹಿಟ್ ಆ್ಯಂಡ್ ರನ್’ ಹೇಳಿಕೆ ನೀಡಿದ್ದಾರೆ. ನಮ್ಮ ವಿರುದ್ಧ ಯಾವುದೇ ಆಧಾರ, ದಾಖಲೆಯಿದ್ದರೆ ಎಚ್‌ಡಿಕೆ ಬಹಿರಂಗಪಡಿಸಲಿ.
-ಬಿ.ವೈ. ವಿಜಯೇಂದ್ರ, ಬಿಜೆಪಿ ಯುವ ಮೋರ್ಚಾ ಪ್ರ.ಕಾರ್ಯದರ್ಶಿ