Advertisement

ಸಹಕಾರ ಕ್ಷೇತ್ರಕ್ಕೆ ಬಲ ತುಂಬಲು ಸರಕಾರ ಬದ್ಧವಾಗಿದೆ : ಸಿಎಂ

11:18 PM Nov 14, 2020 | sudhir |

ಬೆಂಗಳೂರು: ಕೊರೊನಾದಿಂದ ಸಂಕಷ್ಟಕ್ಕೊಳಗಾಗಿರುವ ಸಹಕಾರ ಕ್ಷೇತ್ರಕ್ಕೆ ಬಲ ತುಂಬಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ 67ನೇ ಅಖೀಲ ಭಾರತ ಸಹಕಾರ ಸಪ್ತಾಹ -2020 ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, “ಕೊರೊನಾ ಸೋಂಕು- ಆತ್ಮನಿರ್ಭರ ಭಾರತ-ಸಹಕಾರ ಸಂಘಗಳು’ ಈ ವರ್ಷದ ನಮ್ಮ ಘೋಷವಾಕ್ಯ. ಸಹಕಾರ ಕ್ಷೇತ್ರವನ್ನು ಆರ್ಥಿಕವಾಗಿ ಸದೃಢ ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಸಹಕಾರ ವ್ಯವಸ್ಥೆ ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಸಹಕಾರ ಇಲಾಖೆ ಮತ್ತು ಸಹಕಾರ ಸಂಸ್ಥೆಗಳು ಬಡಜನರಿಗೆ, ವಲಸೆ ಕಾರ್ಮಿಕರಿಗೆ, ದುರ್ಬಲ ವರ್ಗಗಳ ಜನರಿಗೆ ಆಹಾರ, ದವಸ -ಧಾನ್ಯ, ತರಕಾರಿ ವಿತರಣೆಯಂಥ ಮಹತ್ವದ ಕಾರ್ಯ ಮಾಡಿದೆ ಎಂದರು.

ಮಹತ್ವದ್ದು
ಸಹಕಾರ ಸಚಿವ ಎಸ್‌. ಟಿ. ಸೋಮಶೇಖರ್‌ ಮಾತನಾಡಿ, ಸಹಕಾರ ಇಲಾಖೆ ಮೂಲಕ “ಬಡವರ ಬಂಧು’ ಸಾಲ ವಿತರಣೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಸಹ ಶೂನ್ಯಬಡ್ಡಿದರದಲ್ಲಿ ಸಾಲ ನೀಡಿದ್ದೇವೆ ಎಂದರು.
ಸಹಕಾರ ರತ್ನ ಪ್ರಶಸ್ತಿಗಾಗಿ ಯಾರೂ ಅರ್ಜಿ ಹಾಕಿರಲಿಲ್ಲ. ಆದರೆ, ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಸಹಕಾರ ಕ್ಷೇತ್ರಕ್ಕಾಗಿ ದುಡಿಯುತ್ತಿರುವವರನ್ನು ಪ್ರಶಸ್ತಿಗಾಗಿ ಗುರುತಿಸಿದ್ದೆ ಎಂದು ಸೋಮಶೇಖರ್‌ ತಿಳಿಸಿದರು.

ಕೈಪಿಡಿ ಬಿಡುಗಡೆ
ಸಹಕಾರ ಇಲಾಖೆಯ ಮಹಾಮಂಡಲದ ಚಟುವಟಿಕೆಗಳ ಕೈಪಿಡಿಯನ್ನು ಕಂದಾಯ ಸಚಿವ ಆರ್‌. ಅಶೋಕ್‌ ಹಾಗೂ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಬಿಡುಗಡೆಗೊಳಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಸಹಕಾರ ಇಲಾಖೆಯ ಪ್ರ. ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಸಹಕಾರ ಸಂಘಗಳ ನಿಬಂಧಕರಾದ ಎಸ್‌. ಜಿಯಾವುಲ್ಲಾ ಸಹಿತ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳಿದ್ದರು.

Advertisement

ಸಹಕಾರ ರತ್ನ ಪ್ರಶಸ್ತಿ
ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹ ಮೂರ್ತಿ, ಮಂಗಳೂರಿನ ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ, ಮೂಡುಬಿದಿರೆ ಕೋ ಆಪರೇಟಿವ್‌ ಸರ್ವಿಸಸ್‌ ಬ್ಯಾಂಕ್‌ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್‌, ಮೈಸೂರಿನ ಲಲಿತಾ ಜಿ.ಟಿ. ದೇವೇಗೌಡ ಮುಂತಾದ ಹಿರಿಯ ಸಹಕಾರಿಗಳಿಗೆ “ಸಹಕಾರ ರತ್ನ’ ಪ್ರಶಸ್ತಿಯನ್ನು ಸಿಎಂ ಯಡಿಯೂರಪ್ಪ ಪ್ರದಾನ ಮಾಡಿದರು.

ಸಹಕಾರ ಸಚಿವ ಸೋಮಶೇಖರ್‌ ಕಾರ್ಯಕ್ಕೆ ಮುಖ್ಯಮಂತ್ರಿ ಶ್ಲಾಘನೆ
ಮುಖ್ಯಮಂತ್ರಿಯವರ ಕೋವಿಡ್‌ ಪರಿಹಾರ ನಿಧಿಗೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಮುಂದಾಳತ್ವದಲ್ಲಿ 53 ಕೋ. ರೂ.ಗಳಿಗೂ ಅಧಿಕ ಮೊತ್ತದ ದೇಣಿಗೆ ನೀಡುವ ಮೂಲಕ ಸಹಕಾರ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿವೆ. ಸೋಮಶೇಖರ್‌ ಮಾರ್ಗದರ್ಶನದಲ್ಲಿ ರಾಜ್ಯದ 42,524 ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರೂ.ಗಳಂತೆ ಒಟ್ಟು 12.75 ಕೋ. ರೂ. ಗಳ ಪ್ರೋತ್ಸಾಹಧನವನ್ನು ಸಹಕಾರ ಸಂಸ್ಥೆಗಳು ವಿತರಿಸಿರುವುದು ಕೂಡ ಇಡೀ ದೇಶಕ್ಕೆ ಮಾದರಿ ಹಾಗೂ ಹೆಮ್ಮೆಯ ವಿಚಾರ. ಇದಕ್ಕಾಗಿ ನಾನು ವೈಯಕ್ತಿಕವಾಗಿ ಹಾಗೂ ಸರಕಾರದ ಪರವಾಗಿಯೂ ಸೋಮಶೇಖರ್‌ ಅವರನ್ನು ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next