ಬೇಲೂರು: ಕರ್ನಾಟಕ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಶೇ.40 ರಷ್ಟು ಕಮಿಷನ್ ಸರ್ಕಾರವಾಗಿದೆ. ರಾಜ್ಯದಲ್ಲಿ ಕೋಮುಗಲಭೆ ಸೇರಿದಂತೆ ನಾಡಿ ಸೌಹಾರ್ದತೆ ಹಾಳಾಗಿದೆ. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸ್ವಾರ್ಥರಾಜಕೀಯ ಪಕ್ಷಗಳಾಗಿದ್ದು ಇಂತಹ ಜೆಸಿಬಿ ಪಕ್ಷಗಳಿಂದ ರಾಜ್ಯಕ್ಕೆ ಕುತ್ತು ಬರಲಿದ್ದು, ಜನತೆ ಸೈದ್ಧಾಂತಿಕ ತತ್ವಗಳನ್ನು ಅಳವಡಿಸಿಕೊಂಡು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಬಿಎಸ್ಪಿ ಪಕ್ಷವನ್ನು ಬೆಂಬಲಿಸಬೇಕು ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಉತ್ತರ ಪ್ರದೇಶದ ನಿತಿನ್ ಸಿಂಗ್ ಕರೆ ನೀಡಿದರು.
ಬಹುಜನ ಸಮಾಜ ಪಾರ್ಟಿಯ ವತಿಯಿಂದ ಹಮ್ಮಿಕೊಂಡ ಸಂವಿಧಾನ ಸಂರಕ್ಷಣೆಗಾಗಿ ಕರ್ನಾಟಕ ಜೈಭೀಮ್ ಜನಜಾಗೃತಿ ಜಾಥ ಬೇಲೂರಿಗೆ ಆಗಮಿಸಿದ ವೇಳೆ ಪಟ್ಟಣದ ಬಸವೇಶ್ವರ ವೃತ್ತ ಬಳಿ ಸಭೆ ನಡೆಸಿ ಮಾತನಾಡಿದ ಅವರು, ಬಹುಸಂಸ್ಕೃತಿಯಿಂದ ಬದುಕುವ ದೇಶದಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಹುನ್ನಾರವನ್ನು ಆಡಳಿತ ಪಕ್ಷಗಳು ನಡೆಸುತ್ತಾ ಬಂದಿದೆ. ಇದ್ದರಿಂದ ದೇಶದಲ್ಲಿ ಕೋಮುಗಲಭೆ ಸೃಷ್ಟಿಯಾಗುತ್ತಿದೆ. ಇಂತಹ ಪಕ್ಷಗಳಿಂದ ದೇಶದಲ್ಲಿ ಅಭಿವೃದ್ಧಿಯನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಬಿಎಸ್ಪಿ ಪಕ್ಷವನ್ನು ಎಲ್ಲರೂ ಬೆಂಬಲಿಸುವ ಮೂಲಕ ಅಧಿಕಾರ ನೀಡಬೇಕು ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಹುಜನ್ ಮಾತನಾಡಿ, ದೇಶದಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ಸಂವಿಧಾನ ವಿರೋಧಿ ಹೇಳಿಕೆಯಿಂದ ಸಂವಿಧಾನವನ್ನು ಅಪಮಾನ ಮಾಡುತ್ತಿದ್ದಾರೆ. ಇಷ್ಟಾದರೂ ಕಾಂಗ್ರೆಸ್ ಮಾತ್ರ ಮೌನಕ್ಕೆ ಜಾರಿದೆ. ಸಂವಿಧಾನ ಆಚರಣೆಗೆ ಬಂದ ದಿನದಿಂದಲೂ ಭಾರತದಲ್ಲಿ ಪ್ರತಿಯೊಬ್ಬರಿಗೆ ಸಾಮಾಜಿಕ ಸಮಾನತೆ, ಅರ್ಥಿಕ ವಿಮೋಚನೆ, ಲಿಂಗಬೇಧಗಳಿಲ್ಲದೆ ಎಲ್ಲ ವರ್ಗಕ್ಕೆ ಜನಸಂಖ್ಯೆಗೆ ಅನುಗುಣ ಸೂಕ್ತ ಪ್ರಾತಿನಿಧ್ಯ ಎಲ್ಲವನ್ನು ನೀಡಿದರೂ ಸಹ ಸಂವಿಧಾನ ವಿರೋಧದ ಹೇಳಿಕೆ ಬರುತ್ತಿದೆ ಎಂದರು.
ಸಂವಿಧಾನ ರಕ್ಷ ಣೆಗೆ ಜಾಥಾ: ಸಂವಿಧಾನವನ್ನು ಸಂರಕ್ಷಿಸುವ ಮತ್ತು ದೇಶದಲ್ಲಿ ಸಂವಿಧಾನ ನೀಡಿದ ಸವಲತ್ತುಗಳನ್ನು ಜನತೆಗೆ ತಿಳಿಸುವ ಉದ್ದೇಶದಿಂದಲೇ ಬಹುಜನ ಸಮಾಜ ಪಾರ್ಟಿ ಸಂವಿಧಾನ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ವ್ಯಾಪಿ ಜೈಭೀಮ್ ಜನಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದು, ಇದರ ನೇತೃತ್ವವನ್ನು ರಾಷ್ಟ್ರೀಯ ಮಟ್ಟದ ನಾಯಕರು ವಹಿಸಿದ್ದಾರೆ. ತಾಲೂಕಿನ ಅರೇಹಳ್ಳಿ ಮತ್ತು ಬಿಕ್ಕೋಡಿನಲ್ಲಿ ಸುಮಾರು 1000ಕ್ಕೂ ಹೆಚ್ಚಿನ ಬಿಎಸ್ಪಿ ಕಾರ್ಯಕರ್ತರು ಬೈಕ್ ಜಾಥಾದ ಮೂಲಕ ಅದ್ಧೂರಿಯಿಂದ ಸ್ವಾಗತಿಸಿದ್ದಾರೆ. ಹಾಗೇಯೆ ಬೇಲೂರು ಪಟ್ಟಣದಲ್ಲಿ ಅಸಂಖ್ಯಾತ ಕಾರ್ಯಕರ್ತರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೆಹಲಿಯಿಂದ ಆಗಮಿಸಿ ರಾಜ್ಯ ಸಂಯೋಜಕ ದಿನೇಶ್ ಗೌತಮ್, ರಾಜ್ಯ ಸಂಯೋಜಕ ಎಂ.ಗೋಪಿನಾಥ್, ರಾಜ್ಯಾಧ್ಯಕ್ಷ ಡಾ.ಎಂ. ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ ಹಾಗೂ ಜಾಕೀರ್ ಹುಸೇನ್, ರಾಜ್ಯ ಕಾರ್ಯದರ್ಶಿ ಜಾಕೀರ್ ಆಲಿಖಾನ್ ಮತ್ತು ಕಾಂತಪ್ಪ ಅಲಂಗಾರ್, ಜಿಲ್ಲಾ ಕಾರ್ಯದರ್ಶಿ ರಾಜು , ತಾಲೂಕು ಅಧ್ಯಕ್ಷ ಪ್ರಕಾಶ್ , ಉಮೇಶ್, ಲೋಕೇಶ್, ಲೋಹಿತ್, ನಿಂಗರಾಜ್, ಮಂಜುನಾಥ್, ಶ್ರೀನಾಥ್ , ಶಶಿಕುಮಾರ್, ಲೋಕೇಶ್, ಚಿಕ್ಕಣ್ಣ, ಧನಪಾಲಾಕ್ಷ, ಪುಟ್ಟಸ್ವಾಮಿ, ಭಾಗ್ಯಮ್ಮ, ಕವಿತಾ, ಜಗದೀಶ್, ಸುನೀಲ್ ಹಾಗೂ ಶ್ರೀಧರ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.