Advertisement

ಸಮ್ಮಿಶ್ರ ಸರ್ಕಾರದಿಂದ ಬಿಎಸ್‌ಪಿ ನಿರ್ಗಮನ

06:00 AM Oct 12, 2018 | Team Udayavani |

ಬೆಂಗಳೂರು:ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಬಿಎಸ್‌ಪಿಯ ಎನ್‌.ಮಹೇಶ್‌ ರಾಜೀನಾಮೆಯಿಂದ ರಾಜ್ಯ ರಾಜಕೀಯದಲ್ಲಿ ಮತ್ತೂಂದು ಧ್ರುವೀಕರಣವಾಗುತ್ತಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

Advertisement

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌- ಜೆಡಿಎಸ್‌-ಬಿಎಸ್‌ಪಿ  ಮೈತ್ರಿಕೂಟದಡಿ ಸ್ಪರ್ಧೆ ಮಾಡಿ 20  ಸ್ಥಾನ ಗೆಲ್ಲುವ ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್‌ಗೆ ಬಿಎಸ್‌ಪಿಯ ನಿಲುವು ಶಾಕ್‌ ನೀಡಿದೆ. ಉಪ ಚುನಾವಣೆಯಲ್ಲೂ ಪರಿಣಾಮ ಬೀರುವ ಆತಂಕವೂ ಕಾಡುತ್ತಿದೆ.

ದೇಶವ್ಯಾಪಿ ಬಿಜೆಪಿ ಹಾಗೂ ನರೇಂದ್ರ ಮೋದಿ ಎದುರಿಸಲು “ಮಹಾಘಟಬಂಧನ್‌’ ರಚನೆಯ ಮುಂಚೂಣಿಯಲ್ಲಿದ್ದ ಬಿಎಸ್‌ಪಿಯ ಮಾಯಾವತಿ ಕಳೆದ ವಾರ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಇಲ್ಲ ಎಂದು ಘೋಷಿಸಿದಾಗಲೇ ಇಂತದ್ದೊಂದು ಸುಳಿವು ಸಿಕ್ಕಿತ್ತು.

ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಬಿಎಸ್‌ಪಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಅಥವಾ ಮಾಹಾಘಟ್‌ಬಂಧನ್‌ ಭಾಗವಾಗದಿದ್ದರೆ ದಲಿತ ಮತಬ್ಯಾಂಕ್‌ ಚದುರಿ ಕರ್ನಾಟಕದಲ್ಲೂ  ಕಾಂಗ್ರೆಸ್‌ಗೆ ಹಿನ್ನೆಡೆಯುಂಟಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಎಸ್‌ಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ಗೆ ಐದರಿಂದ ಆರು ಕ್ಷೇತ್ರಗಳಲ್ಲಿ ಹಿನ್ನೆಡೆಯುಂಟಾಗಲಿದೆ. ಪ್ರಮುಖವಾಗಿ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಕಲಬುರಗಿ, ವಿಜಯಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತಬ್ಯಾಂಕ್‌ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

Advertisement

ಹೀಗಾಗಿ, ಸಮ್ಮಿಶ್ರ ಸರ್ಕಾರದಿಂದ ಬಿಎಸ್‌ಪಿ ಸಚಿವನ ನಿರ್ಗಮನ ರಾಜ್ಯ ರಾಜಕೀಯ ಅದರಲ್ಲೂ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರುವುದು ಮೇಲ್ನೋಟಕ್ಕೆ ಸ್ಪಷ್ಟ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಹಾಗೂ ಜೆಡಿಎಸ್‌ ಜತೆ ಮೈತ್ರಿ ಬಗ್ಗೆ  ಕೆಲವು ನಾಯಕರ ವಿರೋಧದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ತೀವ್ರ ಅಸಮಾಧಾನಗೊಂಡಿದ್ದು, ಲೋಕಸಭೆ ಚುನಾವಣೆ ವೇಳೆಗೆ ಬೇರೆ ರೀತಿಯ ಬೆಳವಣಿಗೆ ನಡೆದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಜಾಣತನ
ಆದರೆ, ಬಿಎಸ್‌ಪಿ ಜೆಡಿಎಸ್‌ ಜತೆಗಿನ ಮೈತ್ರಿ ಮುಂದುವರಿಸುವ ಜಾಣತನ ತೋರಿರುವುದು ರಾಜ್ಯದ ಮಟ್ಟಿಗೆ ಕೆಲವು ಅನುಮಾನ ಹುಟ್ಟುಹಾಕಿದೆ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೂಂದು ಸುತ್ತಿನ ರಾಜಕೀಯ ಪಲ್ಲಟ ನಡೆಯಲಿದ್ದು ಅದರ ಸೂತ್ರದಾರಿ ಬಿಎಸ್‌ಪಿಯ ಮಾಯಾವತಿ ಆಗಲಿದ್ದಾರೆ.  ಆಗಿನ ಸಂದರ್ಭದಲ್ಲಿ ಜೆಡಿಎಸ್‌ ನೆರವಿಗೆ ಮಾಯಾವತಿ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ  ಐದು ಕ್ಷೇತ್ರಗಳ ಉಪ ಚುನಾವಣೆ ಹಾಗೂ ಮುಂದಿನ 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯುಂಟು ಮಾಡುವುದೇ ಬಿಎಸ್‌ಪಿ ಸಚಿವ ಸಮ್ಮಿಶ್ರ ಸರ್ಕಾರದಿಂದ  ನಿರ್ಗಮಿಸಿರುವ ಹಿಂದಿನ ಕಾರ್ಯತಂತ್ರ ಎಂದೂ ಹೇಳಲಾಗಿದೆ.

ರಾಜೀನಾಮೆಗೆ ಒತ್ತಾಯ
ಮಾಯಾವತಿ ನಿರ್ಧಾರದಿಂದ ಕಾಂಗ್ರೆಸ್‌ನ ಹಿರಿಯ ನಾಯಕರು ಆಕ್ರೋಶಗೊಂಡಿದ್ದಾರೆ. ಇದಾದ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಬಿಎಸ್‌ಪಿ ಸಚಿವ ಮುಂದುವರಿಯುವುದು ಬೇಡ ಎಂಬ ನಿಲುವಿಗೆ ಮಾಯಾವತಿ ಬಂದಿದ್ದರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ  ಕಾಂಗ್ರೆಸ್‌ ವಿರುದ್ಧ ವಾಗಾœಳಿ ನಡೆಸುವಾಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಾಲುದಾರಿಕೆಯ ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿ ಇರುವುದು ಸರಿಯಲ್ಲ ಎಂದು ಮಹೇಶ್‌ ರಾಜೀನಾಮೆ ಕೊಡಿಸುವ ನಿರ್ಧಾರ ಮಾಡಿದ್ದರು. ಜತೆಗೆ ಕಾಂಗ್ರೆಸ್‌ ಹೈಕಮಾಂಡ್‌ ಸಹ ಬಿಎಸ್‌ಪಿ ನಿಲುವು ವಿಚಾರದಲ್ಲಿ ಬೇಸರಗೊಂಡಿತ್ತು. ಈ ವಿಚಾರ ಮಾಯಾವತಿವರೆಗೂ  ಹೋಗಿತ್ತು.ಇದಾದ ನಂತರ ಮಾಯಾವತಿ ಆವರು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಬಿಎಸ್‌ಪಿ ಭಾಗವಾಗಿರುವುದು ಬೇಡ ಎಂದು ಫ‌ರ್ಮಾನ ಹೊರಡಿಸಿದರು. ಮೂರು ದಿನಗಳ ಹಿಂದೆಯೇ ರಾಜೀನಾಮೆ ಕೊಡುವಂತೆ ಎನ್‌.ಮಹೇಶ್‌ ಅವರಿಗೆ ಸೂಚನೆ ನೀಡಲಾಗಿತ್ತು. ಅದಕ್ಕಾಗಿಯೇ ಪಕ್ಷದ ರಾಜ್ಯ ಉಸ್ತುವಾರಿ ಅಶೋಕ್‌ ಸಿದ್ಧಾರ್ಥ್ ಅವರನ್ನು ಕರ್ನಾಟಕಕ್ಕೆ ಕಳುಹಿಸಲಾಗಿತ್ತು  ಎಂದು ಹೇಳಲಾಗಿದೆ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next