Advertisement

ಬಿಎಸ್ಸೆನ್ನೆಲ್‌ ನಾಟ್‌ ರೀಚೆಬಲ್‌?

10:19 PM Jan 29, 2020 | mahesh |

ಸುಳ್ಯ: ಹಲವು ಎಡರು-ತೊಡರುಗಳಲ್ಲಿ ದಿನ ದೂಡುತ್ತಿರುವ ಬಿಎಸ್ಸೆನ್ನೆಲ್‌ ಸಂಸ್ಥೆಯಲ್ಲಿ ಸ್ವಯಂ- ನಿವೃತ್ತಿಯಿಂದ ಸಿಬಂದಿ ಕೊರತೆ ಉಂಟಾಗಿ ತಾಲೂಕಿನಲ್ಲಿ ಸಂಪರ್ಕ ನಾಟ್‌ರೀಚೆಬಲ್‌ ಆಗುವ ಲಕ್ಷಣ ಕಾಣಿಸಿದೆ. ತಾಲೂಕಿನ ಸುಳ್ಯ ಮತ್ತು ಬೆಳ್ಳಾರೆ ಸಬ್‌ ಡಿವಿಜನ್‌ನಲ್ಲಿ ಶೇ. 97ರಷ್ಟು ಸಿಬಂದಿ ಸ್ವಯಂ ನಿವೃತ್ತಿಗೊಳ್ಳುತ್ತಿದ್ದು, ಕಚೇರಿ ಹಾಗೂ ಟೆಕ್ನಿಕಲ್‌ ವಿಭಾಗದಲ್ಲಿ ಸಿಬಂದಿ ಅಲಭ್ಯತೆ ಸಂಪರ್ಕಕ್ಕೆ ತೊಡಕಾಗುವ ಸಾಧ್ಯತೆ ಇದೆ.

Advertisement

33 ಮಂದಿ ಸ್ವಯಂ ನಿವೃತ್ತಿ
ಸುಳ್ಯ ಡಿವಿಜನ್‌ನಲ್ಲಿ ಎರಡು ವಿಭಾಗಗಳು ಇವೆ. ಸುಳ್ಯ ಸಬ್‌ ಡಿವಿಜನ್‌ನಲ್ಲಿ 28 ಸಿಬಂದಿ ಪೈಕಿ 24 ಮಂದಿ ಹಾಗೂ ಬೆಳ್ಳಾರೆ ಸಬ್‌ ಡಿವಿಜನ್‌ನಲ್ಲಿ 9 ಸಿಬಂದಿ ಪೈಕಿ 8 ಮಂದಿ ಇದೇ ಜ. 31ರಂದು ಸ್ವಯಂನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ ಸುಳ್ಯ ಕಚೇರಿಯಲ್ಲಿ 4 ಮಂದಿ ಮತ್ತು ಬೆಳ್ಳಾರೆಯಲ್ಲಿ ಓರ್ವ ಸಿಬಂದಿ ಮಾತ್ರ ಉಳಿದುಕೊಳ್ಳಲಿದ್ದಾರೆ. ಇದರಿಂದ ನಿತ್ಯದ ಕೆಲಸ ಕಾರ್ಯಕ್ಕೆ ಸಿಬಂದಿ ಕೊರತೆ ಉಂಟಾಗುವ ಆತಂಕವಿದೆ.

ನೆಟ್‌ವರ್ಕ್‌ ಸಮಸ್ಯೆ
ಬಿಎಸ್ಸೆನ್ನೆಲ್‌ ಸಂಪರ್ಕ ನಂಬಿರುವ ಮಡಪ್ಪಾಡಿ, ಕೊಲ್ಲಮೊಗ್ರು, ಹರಿಹರ- ಪಲ್ಲತ್ತಡ್ಕ ಸಹಿತ ಹತ್ತಾರು ಗ್ರಾಮದಲ್ಲಿ ಮೊಬೈಲ್‌ ಟವರ್‌ ಕೈ ಕೊಟ್ಟು ನೆಟ್‌ವರ್ಕ್‌ಗೆ ಪರದಾಡುತ್ತಿರುವ ಈ ಹೊತ್ತಲ್ಲೇ ಸಿಬಂದಿ ಅಲಭ್ಯತೆ ಇಲ್ಲಿನ ಸಮಸ್ಯೆಯನ್ನು ಇನ್ನಷ್ಟು ಹೆಚ್ಚು ಮಾಡಲಿದೆ. ಒಂದೆಡೆ ಟವರ್‌ ನಿರ್ವಹಣೆಗೆ ಡೀಸೆಲ್‌ ಹಾಕಲು ಹಣ ಇಲ್ಲದ ಸ್ಥಿತಿ ಉಂಟಾಗಿದ್ದು, ವಿದ್ಯುತ್‌ ಕೈ ಕೊಟ್ಟರೆ ಬಿಎಸ್ಸೆನ್ನೆಲ್‌ ದೂರವಾಣಿ ಕೂಡ ಸ್ತಬ್ಧವಾಗುತ್ತದೆ.  ಇದೀಗ ಅದರೊಂದಿಗೆ ಸಿಬಂದಿ ಕೊರತೆಯೂ ಬಿಎಸ್ಸೆನ್ನೆಲ್‌ ಬಹುತೇಕ ಮುಚ್ಚುವ ಹಂತದಲ್ಲಿರುವ ಸಂಕೇತವಾಗಿದೆ.

ವಿಆರ್‌ಎಸ್‌ಗೆ ಅವಕಾಶ
ಹೊಸ ತಂತ್ರಜ್ಞಾನ ಮತ್ತು ಸ್ವಯಂಚಾಲಿತ ಯಂತ್ರಗಳ ಕಾರ್ಯಾಚರಣೆ ಪರಿಣಾಮ ಬಿಎಸ್ಸೆನ್ನೆಲ್‌ಗೆ ಮಾನವ ಸಂಪನ್ಮೂಲ ಹೊರೆಯಾಗುತ್ತಿದೆ. ಖರ್ಚು ಕಡಿಮೆಗೊಳಿಸಿ ಹೆಚ್ಚು ಸೇವೆ ನೀಡುವ ಉದ್ದೇಶದೊಂದಿಗೆ ವಿಆರ್‌ಎಸ್‌ ಯೋಜನೆ ಜಾರಿಗೊಳಿಸಲಾಗಿದೆ. ಒಟ್ಟು ಆದಾಯದ ಶೇ. 70ರಷ್ಟು ನೌಕರರ ಸಂಬಳಕ್ಕೆ ಪಾವತಿ ಯಾಗು ತ್ತಿದ್ದುದರಿಂದ ಸಂಸ್ಥೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತ್ತು. ವಿಆರ್‌ಎಸ್‌ ಯೋಜನೆಯಿಂದ ಫೆಬ್ರವರಿಯಿಂದ 7,000 ಕೋಟಿ ರೂ. ಉಳಿತಾಯವಾಗಲಿದೆ ಎಂಬ ವಾದವಿದ್ದರೂ ಸಿಬಂದಿ ಕೊರತೆ ಕಾರಣದಿಂದ ಉಂಟಾಗುವ ಸೇವಾ ವ್ಯತ್ಯಯಕ್ಕೆ ಪರ್ಯಾಯ ದಾರಿಯ ಬಗ್ಗೆ ಇನ್ನೂ ಸ್ಪಷ್ಟವಾದ ತೀರ್ಮಾನ ಪ್ರಕಟವಾಗಿಲ್ಲ. ಹಾಗಾಗಿ ಗ್ರಾಹಕರೂ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೈಕೊಡುವ ವಿದ್ಯುತ್ತಿನಿಂದಾಗಿ ಟವರ್‌ಗಳೂ ಆಗಾಗ ಸ್ತಬ್ಧವಾಗಿ ಸಮಸ್ಯೆಯಾಗುತ್ತಿದೆ.

ವಿಆರ್‌ಎಸ್‌ಗೆ ಅರ್ಜಿ
ಬಿಎಸ್ಸೆನ್ನೆಲ್‌ ಸುಳ್ಯ ಸಬ್‌ಡಿವಿಜನ್‌ನಲ್ಲಿ 33 ಮಂದಿ ಹಾಗೂ ಬೆಳ್ಳಾರೆಯಲ್ಲಿ 8 ಮಂದಿ ವಿಆರ್‌ಎಸ್‌ಗೆ ಅರ್ಜಿ ಸಲ್ಲಿಸಿದ್ದು, ಸ್ವಯಂನಿವೃತ್ತಿ ಪಡೆಯಲಿದ್ದಾರೆ. ಸುಳ್ಯದಲ್ಲಿ 4 ಮತ್ತು ಬೆಳ್ಳಾರೆಯಲ್ಲಿ ಓರ್ವ ಸಿಬಂದಿ ಕರ್ತವ್ಯದಲ್ಲಿ ಉಳಿದುಕೊಳ್ಳಲಿದ್ದಾರೆ.
– ಗೋಪಾಲಕೃಷ್ಣ ಭಟ್‌  ಎಸ್‌ಡಿಇ, ಸುಳ್ಯ ಡಿವಿಜನ್‌

Advertisement

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next