Advertisement

ಬಿಎಸ್‌ಎನ್‌ಎಲ್‌ಗೆ ಮರುಜೀವ

09:52 AM Oct 25, 2019 | Team Udayavani |

ಹೊಸದಿಲ್ಲಿ: ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ಗೆ ಮರುಜೀವ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಘೋಷಣೆಗಳನ್ನು ಮಾಡಿದೆ. ಬಾಂಡ್‌ಗಳನ್ನು ಬಿಡುಗಡೆ ಮಾಡುವ ಮೂಲಕ 30 ಸಾವಿರ ಕೋಟಿ ರೂ. ಒದಗಿಸುವುದು, ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಾಂತರಗಳನ್ನು ಸರಕಾರದ ವೆಚ್ಚದಲ್ಲೇ ಒದಗಿಸುವುದು, ಬಿಎಸ್‌ಎನ್‌ಎಲ್‌ ಹೊಂದಿರುವ ಸೊತ್ತುಗಳನ್ನು ಬಳಕೆ ಮಾಡಿಕೊಳ್ಳುವುದು ಮತ್ತು ಸಿಬಂದಿಗೆ ಸ್ವಯಂ ನಿವೃತ್ತಿ ಯೋಜನೆಗಳ ಘೋಷಣೆಯನ್ನು ಒಳಗೊಂಡ ನಾಲ್ಕು ಹಂತದ ಪ್ಯಾಕೇಜ್‌ ಅನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

Advertisement

ಉದ್ಯೋಗಿಗಳಿಗೆ ಸಂಬಳ ಕೊಡಲೂ ಹೆಣಗಾಡುತ್ತಿರುವ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳಿಗೆ ಸರಕಾರ 29,937 ಕೋಟಿ ರೂ. ಬಂಡವಾಳವನ್ನು ಒದಗಿಸಲಿದೆ. ಇದರ ಜತೆಗೆ ಬಾಂಡ್‌ಗಳನ್ನು ಬಿಡುಗಡೆ ಮಾಡಿ 15 ಸಾವಿರ ಕೋಟಿ ರೂ. ಹೂಡಿಕೆ ಒದಗಿಸಲಾಗುತ್ತದೆ. ಈ ಬಾಂಡ್‌ಗಳಿಗೆ ಸರಕಾರ ಗ್ಯಾರಂಟಿಯನ್ನು ನೀಡಲಿದೆ. ಬಿಎಸ್‌ಎನ್‌ಎಲ್‌ ತನ್ನ ಬಳಿ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದು, ಇದನ್ನು ವಾಣಿಜ್ಯಿಕ ಉದ್ದೇಶಕ್ಕೆ ಬಳಕೆ ಮಾಡಿ 38 ಸಾವಿರ ಕೋಟಿ ರೂ. ಗಳಿಸುವ ಪ್ರಸ್ತಾವನೆಯನ್ನೂ ಇದರಲ್ಲಿ ಮಾಡಲಾಗಿದೆ.

ಬಿಎಸ್‌ಎನ್‌ಎಲ್‌-ಎಂಟಿಎನ್‌ಎಲ್‌ ವಿಲೀನ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಅನ್ನು ವಿಲೀನಗೊಳಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿಯುವವರೆಗೆ ಬಿಎಸ್‌ಎನ್‌ಎಲ್‌ನ ಅಂಗಸಂಸ್ಥೆ ಯಾಗಿ ಕೆಲಸ ಮಾಡುತ್ತದೆ. ಷೇರು ಮಾರುಕಟ್ಟೆಯಲ್ಲಿ ಎಂಟಿಎನ್‌ಎಲ್‌ ಲಿಸ್ಟ್‌ ಆಗಿರುವುದರಿಂದ ವಿಲೀನ ಪ್ರಕ್ರಿಯೆ ಹೆಚ್ಚು ಸಮಯವನ್ನು ತೆಗೆದುಕೊಳ್ಳಲಿದೆ.

ಬರಲಿದೆ ಬಿಎಸ್‌ಎನ್‌ಎಲ್‌ 4ಜಿ
ದೇಶದ ಕೆಲವೆಡೆಗಳಲ್ಲಿ 4ಜಿ ತರಂಗಾಂತರ ಇಲ್ಲ ದಿರುವುದರಿಂದ ಬಿಎಸ್‌ಎನ್‌ಎಲ್‌ ಸೇವೆ ಇತರ ಖಾಸಗಿ ಟೆಲಿಕಾಂ ಸಂಸ್ಥೆಗಳಿಗಿಂತ ಹಿಂದುಳಿದಿತ್ತು. ಹೀಗಾಗಿ ಕೇಂದ್ರ ಸರಕಾರ ತನ್ನದೇ ವೆಚ್ಚದಲ್ಲಿ ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಾಂತರಗಳನ್ನು ಒದಗಿಸಲು ನಿರ್ಧರಿಸಿದೆ. 2016ರ ಬೆಲೆಯಲ್ಲಿ ತರಂಗಾಂತರಗಳನ್ನು ಒದಗಿಸಲಾಗುತ್ತದೆ. ಇದಕ್ಕೆ 4 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

ದೇಶಾದ್ಯಂತ 4ಜಿ ತರಂಗಾಂತರ ಹಂಚಿಕೆ ಮಾಡಲು ಕೇಂದ್ರ ನಿರ್ಧಾರ
30 ಸಾವಿರ ಕೋ.ರೂ. ಜತೆಗೆ ಬಾಂಡ್‌ ಮೂಲಕ ಬಂಡವಾಳ ಸೌಲಭ್ಯ
ಉದ್ಯೋಗಿಗಳಿಗೆ ಆಕರ್ಷಕ ಸ್ವಯಂ ನಿವೃತ್ತಿ ಯೋಜನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next