ಹೇಳಿದ ತಕ್ಷಣ ದುರಸ್ತಿ ಮಾಡಿಸಿಕೊಡಲು ನಮ್ಮಲ್ಲಿ ಸಿಬ್ಬಂದಿ ಇಲ್ಲ. ನೀವು ಸರತಿ ಪ್ರಕಾರ ಕಾಯುವುದಾದರೆ ಇನ್ನೊಂದು ಎಂಟು ದಿವಸದಲ್ಲಿ ದುರಸ್ತಿಯಾಗಬಹುದು. ಇಲ್ಲ, ನಿಮಗೆ ಅವಸರ ಇದೆ ಅಂತಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು’ ಎಂದು ಅತ್ಯಂತ ನಿಷ್ಠುರವಾಗಿ ಹೇಳುತ್ತಾರೆ. ಪರ್ಯಾಯ ಅಂದರೆ ಹಾಳಾದ ದೂರವಾಣಿಯನ್ನು ತಂದುಕೊಟ್ಟು ಕೊನೆಯ ಸಲಾಮು ಹೇಳಿ ಬೇರೆ ದೂರವಾಣಿ ಕಂಪೆನಿಯ ಕಡೆಗೆ ಮುಖ ಮಾಡುವುದು.
Advertisement
ಇಂಥ ನಿಷ್ಠುರದ, ಬೇಜವಾಬ್ದಾರಿಯ ಅಧಿಕಾರಿಗಳಿಂದಾಗಿಯೇ ಇಂದು ಒಂದು ಕಾಲದಲ್ಲಿ ಎಲ್ಲರೂ ಅರ್ಜಿ ಸಲ್ಲಿಸಿ, ಮುಂಗಡ ಠೇವಣಿ ನೀಡಿ ತುದಿಗಾಲಿನಲ್ಲಿ ಕಾಯುತ್ತಿದ್ದ ಸ್ಥಿರ ದೂರವಾಣಿ ಎಂಬ ಅಭಿಮಾನದ ವಸ್ತು ಶಾಶ್ವತ ಅವಸಾನದ ಅಂಚು ತಲುಪಿದೆ. ಅಧಿಕಾರಿಗಳ ನಿರ್ಲಕ್ಷ್ಯದ ಪ್ರತೀಕವಾಗಿ ಕಚೇರಿ ಮ್ಯೂಸಿಯಮ್ ಆಗಿ ಪರಿವರ್ತನೆಯಾಗುತ್ತಿದೆ.
Related Articles
Advertisement
2015 ಜನವರಿಯಲ್ಲಿ ದೇಶದಲ್ಲಿ 1. 64 ಕೋಟಿ ಸ್ಥಿರ ದೂರವಾಣಿಗಳನ್ನು ಬಳಸಲಾಗುತ್ತಿತ್ತು. ಈ ವರ್ಷ ಮಾರ್ಚ್ ತಿಂಗಳಲ್ಲಿ ಅದು 1. 23 ಕೋಟಿಗಳಿಗೆ ಇಳಿದಿದೆ ಎನ್ನುತ್ತಿವೆ ಲೆಕ್ಕಾಚಾರಗಳು. ಅಂದರೆ ಶೇ. 25ರಷ್ಟು ಕುಸಿದಿರುವುದು ಮೂರು ವರ್ಷಗಳಲ್ಲಿ. ಹಾಗಿದ್ದರೆ ಈ ಸೌಲಭ್ಯ ಶಾಶ್ವತವಾಗಿ ಕೊನೆಯುಸಿರೆಳೆಯಲು ಹೆಚ್ಚು ಕಾಲ ಬೇಕಾಗಿಲ್ಲ. ಬೇರೆ ಬೇರೆ ಕಂಪೆನಿಗಳು ದೂರವಾಣಿ ಸೌಲಭ್ಯ ನೀಡುತ್ತ ಮಾರುಕಟ್ಟೆಯನ್ನು ಆವರಿಸುವಾಗಲೂ ಶೇ. 60ರ ಗಡಿಯಲ್ಲಿದ್ದ ಭಾರತ ಸಂಚಾರ ನಿಗಮ ಹೀಗೆ ತನ್ನ ಅನಾಸ್ಥೆಯಿಂದಲೇ ಶೀಘ್ರವೇ ದಂತಕತೆಯಾಗಬಹುದೆ? ಬ್ರಾಡ್‌ಬ್ಯಾಂಡ್ ಸೌಲಭ್ಯಕ್ಕಾಗಿ ನೆಲದಾಳದಲ್ಲಿ ಹಾಕಿದ ಕೇಬಲ್, ಒಎಫ್ಸಿ, ತಂತಿಗಳು, ಕಂಬಗಳು ಎಲ್ಲದರ ಮೂಲಕ ಇತಿಹಾಸ ಸೃಷ್ಟಿಸಿದ್ದ ಸಂಸ್ಥೆ ಇದಕ್ಕೆಲ್ಲ ಖರ್ಚಾದ ಹಣವನ್ನು ಲೆಕ್ಕ ಹಾಕಿದಂತೆ ಕಾಣಿಸುವುದಿಲ್ಲ.
ಇಂದಿಗೂ ಈ ಸಂಸ್ಥೆಯ ಬ್ರಾಡ್‌ಬ್ಯಾಂಡ್ ಸೌಲಭ್ಯಕ್ಕಾಗಿ ಕಾದು ನಿಂತ ಗ್ರಾಮೀಣ ಜನಗಳಿದ್ದಾರೆ. ಇತರ ಕಂಪೆನಿಗಳಿಗಿಂತ ಅದು ಹೆಚ್ಚು ವೇಗ ಹೊಂದಿದೆ ಮತ್ತು ದರ ಕಡಿಮೆ ಎಂಬ ಭಾವನೆಯೂ ಇದೆ. ಆದರೆ ಅಧಿಕಾರಿಗಳಿಗೆ ಸಂಸ್ಥೆ ಉಳಿಯಬೇಕೆಂಬ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದನ್ನು ಜನಪ್ರಿಯಗೊಳಿಸುವ ಬದಲು ಕೊನೆಗೊಳಿಸುವ ಕಡೆಗೇ ಹೆಚ್ಚು ಒಲವು ತೋರುವಂತೆ ಕಾಣುತ್ತದೆ. ಗ್ರಾಹಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಅಧಿಕಾರಿಗಳ ಆಯ್ಕೆಯಿಲ್ಲ. ನಮಗೆ ಸಂಬಳ ಬರುತ್ತದೆ, ಜನಸೇವೆಯ ಕಳಕಳಿ ನಮಗೆ ಅಗತ್ಯವಿಲ್ಲ ಎನ್ನುವಂತಹ ನೌಕರರ ಹೆಚ್ಚಳ ಇದು ಸಂಸ್ಥೆಯ ಕಚೇರಿಯನ್ನು ಮ್ಯೂಸಿಯಂ ಆಗಿ ಬದಲಾಯಿಸುವಂತಾಗಿದೆ.
ಪಂಜಾಬ್ ರಾಜ್ಯದಲ್ಲಿ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಗೆ ಕೊನೆಯ ನಮಸ್ಕಾರ ಹೇಳಿದವರ ಸಂಖ್ಯೆ ದೊಡ್ಡದಿದೆ. ದೇಶದ ದೂರವಾಣಿ ಸಂಸ್ಥೆಗಳಲ್ಲಿ ಐದನೆಯ ಸ್ಥಾನದಲ್ಲಿದ್ದ ಈ ಸಂಸ್ಥೆ ಐದು ಟೆಲಿಕಾಮ್ ಕಾರ್ಖಾನೆಗಳನ್ನು ಹೊಂದಿದೆ. ನೌಕರರಿಗಾಗಿ ಮೂರು ತರಬೇತಿ ಸಂಸ್ಥೆಗಳಿವೆ. ವಿಶೇಷ ದೂರವಾಣಿ ಸಂಪರ್ಕ ಘಟಕಗಳು ಸಾಕಷ್ಟಿವೆ. ನಗರಗಳಲ್ಲಿ 20. 82 ದಶಲಕ್ಷ, ಗ್ರಾಮಗಳಲ್ಲಿ 3. 51 ಮಿಲಿಯನ್ ಸ್ಥಿರ ದೂರವಾಣಿ ಚಂದಾದಾರರನ್ನು ಹೊಂದಿದ್ದ ಅದು ಈಗ ಕ್ರಮಾಗತ ಇಳಿಕೆಯ ಹಾದಿ ಸೇರಿಕೊಂಡಿದೆ. ಜಿಯೋ ಸಂಸ್ಥೆ ಶೇ.50ರ ಗಡಿ ದಾಟುವಾಗ ಸರಕಾರಿ ಸ್ವಾಮ್ಯದ ಒಂದು ಸಂಸ್ಥೆ ಶೇ.6ಕ್ಕಿಂತ ಕೆಳಗಿಳಿಯತೊಡಗಿದೆ ಎಂಬ ವರದಿಯನ್ನು ನೋಡಿದರೆ ಏನಿದರ ಅರ್ಥ? ಖಾಸಗಿಬೆಳವಣಿಗೆಗೆ ಸರಕಾರಿ ಸಂಸ್ಥೆಯ ಉದ್ಯೋಗಿಗಳು ಮಣೆ ಹಾಕುತ್ತಿದ್ದಾರೆಯೇ ಅಲ್ಲ ಸರಕಾರ ನೀಡುವ ಸೌಕರ್ಯಗಳ ಕೊರತೆ ಕಾರಣವೇ ಎಂಬ ಪ್ರಶ್ನೆ ಮೂಡುತ್ತದೆ. ಇಲ್ಲಿ ಇದೊಂದು ಸೇವೆ ಎಂಬ ಭಾವನೆಯಿರುವ ಅಧಿಕಾರಿಗಳ ಕೊರತೆಯಿದೆ. ದೂರುಗಳಿಗೆ ತಕ್ಷಣ ಸ್ಪಂದಿಸುವ ಮನೋಧರ್ಮ ಮಾಯವಾಗಿದೆ. ಮಿತಿಮೀರಿದ ಬಾಡಿಗೆಯನ್ನು ಇಳಿಸಲು ಸಂಸ್ಥೆ ಸಿದ್ಧವಾಗಿಲ್ಲ. ಆರೇಳು ಮಂದಿ ಕೂಡಿ ಕೇಳಿದರೆ ಸ್ಥಿರ ದೂರವಾಣಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯ ನೀಡಬೇಕೆಂಬ ಕಾಯಿದೆಯನ್ನು ಪರಿಗಣಿಸುವುದಿಲ್ಲ. ಭಾರತ ಪ್ರಗತಿ ಹೊಂದಿದೆ ನಿಜ. ಆದರೆ ಸಂಪರ್ಕಕ್ಕೆ ಭಾರತ ಸಂಚಾರಿ ನಿಗಮದ ದೂರವಾಣಿ ಬಿಟ್ಟರೆ ಬೇರೆ ಇಲ್ಲವೆಂಬ ದುಃಸ್ಥಿತಿ ಎದುರಿಸುತ್ತಿರುವ ಹಳ್ಳಿಗಳು ಹಾಗೆಯೇ ಇವೆ. *ಪ.ರಾಮಕೃಷ್ಣಶಾಸ್ತ್ರಿ