Advertisement

ಬಿಎಸ್ಸೆನ್ನೆಲ್‌ ನೌಕರರ ಆಕ್ರೋಶ

09:49 AM Feb 19, 2019 | |

ವಿಜಯಪುರ: ಕೇಂದ್ರ ಸರ್ಕಾರ ಸೌಮ್ಯದಲ್ಲಿರುವ ಬಿಎಸ್ಸೆನ್ನೆಲ್‌ ದೂರ ಸಂಪರ್ಕ ಸೇವಾ ಸಂಸ್ಥೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಬಿಎಸ್ಸೆನ್ನೆಲ್‌ ನೌಕರರು ಧರಣಿ ನಡೆಸಿದರು.

Advertisement

ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಟೆಲಿಕಾಂ ನೌಕರರು ಮೂರು ದಿನ ಮುಷ್ಕರ ನಡೆಸಲಿದ್ದಾರೆ. ಸೋಮವಾರ ಬಿಎಸ್ಸೆನ್ನೆಲ್‌ ಪ್ರಧಾನ ಕಚೇರಿ ಎದುರು ಅಧಿಕಾರಿ ಮತ್ತು ಅಧಿಕಾರೇತರ ನೌಕರರ ಸಂಘಟನೆಗಳ ಒಕ್ಕೂಟ, ಆಲ್‌ ಯೂನಿಯನ್ಸ್‌ ಮತ್ತು ಅಸೋಸಿಯೇಷನ್ಸ್‌ ಆಫ್‌ ಬಿಎಸ್ಸೆನ್ನೆಲ್‌
ನೇತೃತ್ವದಲ್ಲಿ ನೌಕರರು ಧರಣಿ ನಡೆಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಎಸ್‌.ಆರ್‌. ನಾಯಕ ಮಾತನಾಡಿ, ಬಿಎಸ್ಸೆನ್ನೆಲ್‌ ಸಂಸ್ಥೆ ಹಿಂದಿನ ಹಾಗೂ ಇಂದಿನ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ತನ್ನ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ.

ಸಂಸ್ಥೆಯಲ್ಲಿ ಸುಮಾರು 2 ಲಕ್ಷ ಕಾಯಂ ನೌಕರರು, 1 ಲಕ್ಷ ಗುತ್ತಿಗೆ ನೌಕರರು ಹಾಗೂ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿದೆ. ಅನೇಕ ಕುಟುಂಬಗಳಿಗೆ ಬಿಎಸ್ಸೆನ್ನೆಲ್‌ ಜೀವನಾಧಾರವಾಗಿದೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಇಂದು ಸಂಸ್ಥೆ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದೆ ಎಂದು ದೂರಿದರು.

ಬಿಎಸ್ಸೆನ್ನೆಲ್‌ ಸಂಸ್ಥೆಗೆ ಸೇರಿದ ಆಸ್ತಿ ಮತ್ತು ಖಾಲಿ ಭೂಮಿ ಹಾಗೂ ನಿವೇಶನಗಳಿದ್ದು ಒಂದು ಲೆಕ್ಕಾಚಾರದಂತೆ ಮಾರುಕಟ್ಟೆ ದರ 1,00,000 ಕೋಟಿ ರೂ.ಯಿದ್ದು, ಇದರ ಮೂಲಕ ನಾವು ನಮ್ಮ ಸಂಸ್ಥೆಗೆ ವಾರ್ಷಿಕ 10,000 ಕೋಟಿ ರೂ.ಗಳಿಂದ 12 ಸಾವಿರ ಕೋಟಿ ರೂ. ಆದಾಯ
ಗಳಿಸಬಹುದಾಗಿದೆ. ಈ ಆಸ್ತಿಗಳನ್ನು ಸದುಪಯೋಗಪಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಬಿಎಸ್ಸೆನ್ನೆಲ್‌ಗೆ ಕೂಡಲೇ ಕೇಂದ್ರ ಸರ್ಕಾರ 4ಜಿ ಸೇವೆಗಳನ್ನು ಒದಗಿಸಲು ಅನುಮತಿ ನೀಡಬೇಕು. ಕಳೆದ ವರ್ಷದ ಫೆಬ್ರವರಿ 24ರಂದು ಕೇಂದ್ರ ಸಂಪರ್ಕ ಮಂತ್ರಿಗಳು 4ಜಿ ತರಂಗಳನ್ನು ಸಂಸ್ಥೆಗೆ ಕೊಡಲು ದೂರ ಸಂಪರ್ಕ ಇಲಾಖಾ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಆದರೆ ಇಂದಿಗೂ ಕಾರ್ಯಗತವಾಗಿಲ್ಲ ಎಂದು ದೂರಿದರು.

ಬಿಎಸ್ಸೆನ್ನೆಲ್‌ ನೌಕರರ ವೇತನ ಪರಿಷ್ಕರಣೆ ಮಾಡಬೇಕು. ಬಿಎಸ್ಸೆನ್ನೆಲ್‌ ತನ್ನ ಜಾಲವನ್ನು ಅಭಿವೃದ್ಧಿಪಡಿಸಲು ಅತಿ ಅವಶ್ಯವಿರುವ ಮೂಲಭೂತ ಸಾಮಗ್ರಿ ಖರೀದಿಸಲು ಕೇಂದ್ರ ಸಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. 

ವಿವಿಧ ಟೆಲಿಕಾಂ ನೌಕರರ ಸಂಘಟನೆ ಪ್ರಮುಖರಾದ ಎಸ್‌.ಎಲ್‌. ಕುಲಕರ್ಣಿ, ವಿ.ಆರ್‌. ತೆಲಗಾರ, ವಿ.ಡಿ. ನಾಯಕ, ಎಂ.ಜಿ. ಬಿಜ್ಜರಗಿ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next