ಕಲಬುರಗಿ: ಭಾರತ ದೂರ ಸಂಪರ್ಕ ವ್ಯವಸ್ಥೆ ಒಡೆತನದಲ್ಲಿ ಖಾಸಗಿ ಸಹಭಾಗಿತ್ವದ ಬಗ್ಗೆ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಬಿಎಸ್‌ಎನ್‌ಎಲ್ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಪ್ರಧಾನಿಗೆ ಮನವಿಸಲ್ಲಿಸಿ, ಬಿಎಸ್‌ಎನ್‌ಎಲ್ ಒಡೆತನ ಶೇ.100 ರಷ್ಟು ಮುಂದುವರಿಯಬೇಕು.
ಯಾವುದೇ ಹಂತದಲ್ಲಿ ಖಾಸಗಿಯವರಿಗೆ ಪಾಲುದಾರಿಕೆ ನೀಡಬಾರದು. ಇದರಿಂದ ನಿಗಮಕ್ಕೆ ದೊಡ್ಡ ನಷ್ಟವಾಗುತ್ತದೆ ಎಂದರು. ಖಾಸಗಿ ದೂರ ಸಂಪರ್ಕ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು, ತೃಪ್ತಿಪಡಿಸಲು ಕರೆಗಳನ್ನು ಡಾಟಾ ಬಳಕೆಗಳನ್ನು ಉಚಿತವಾಗಿ ನೀಡುತ್ತಿವೆ.
ಇಂತಹ ಸಂದರ್ಭದಲ್ಲಿ ಖಾಸಗಿಯವರೊಂದಿಗೆ ಕೈಜೋಡಿಸಿದಲ್ಲಿ ಬಿಎಸ್ ಎನ್‌ಎಲ್‌ಗೆ ತೀವ್ರ ಹೊಡೆತ ಬೀಳುತ್ತದೆ ಎಂದರು. ಬಿಎಸ್‌ಎನ್‌ಎಲ್‌ನಿಂದ ಟವರ್ ಕಂಪನಿ ಬೇರ್ಪಡಿಸುವುದರಿಂದ ಇಲಾಖೆಗೆ ಮಾರಕವಾಗಲಿದೆ. ಇದರಿಂದ ಇಲಾಖೆ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗುತ್ತದೆ.
ಆದ್ದರಿಂದ ಇಲಾಖೆ ಸ್ವತಃ ಟವರ್ ಕಂಪನಿ ಸ್ಥಾಪಿಸಬೇಕೆಂದರು. ರಿಲಯನ್ಸ್ ಜಿಯೋ ಜೊತೆಗೆ ಪ್ರಧಾನಿ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ಇಲಾಖೆಗೆ ತೊಂದರೆಯಾಗುತ್ತಿದೆ. ಜಿಯೋ ಮೊದಲು 90 ದಿನದವರೆಗೆ ಅತ್ಯಂತ ಕಡಿಮೆ ದರದಲ್ಲಿ ಸೇವೆ ಒದಗಿಸಿ, ನಂತರ ಅದನ್ನು 180 ದಿನಕ್ಕೆ ವಿಸ್ತರಿಸಿದೆ.
ಇದು ನಿಯಮಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಜಿಯೋ ಕಂಪನಿಗೆ ದಂಡ ವಿಧಿಸಬೇಕು. ಜಿಯೋಜತೆಗಿನ ಸಹಕಾರವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಚಾಲಕ ಎಲ್. ಆರ್. ಭೋಸ್ಲೆ ಹಾಗೂ ಇತರ ಬಿಎಸ್‌ಎನ್‌ಲ್ ನೌಕರರು ಭಾಗವಹಿಸಿದ್ದರು.