Advertisement

ಬಿಎಸ್ಸೆನ್ನೆಲ್‌ ಬಿಲ್‌ ಬಾಕಿ; 104 ಆರೋಗ್ಯವಾಣಿ ಬಂದ್‌ , ಯೋಜನೆ ಸ್ಥಗಿತದ ಹುನ್ನಾರವೇ?

11:45 AM Dec 09, 2021 | Team Udayavani |

ಹುಬ್ಬಳ್ಳಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬೆರಳ ತುದಿಯಲ್ಲೇ ಆರೋಗ್ಯ ಸೇವೆ ದೊರೆಯಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಆರಂಭವಾಗಿದ್ದ 104 ಆರೋಗ್ಯವಾಣಿ ಒಂದು ವಾರದಿಂದ ನಿಷ್ಕ್ರಿಯವಾಗಿದೆ. ಬಿಎಸ್ಸೆನ್ನೆಲ್‌ಗೆ ಪಾವತಿ ಮಾಡಬೇಕಾದ ಬಿಲ್‌ ಬಾಕಿ ಉಳಿಸಿಕೊಂಡ ಕಾರಣಕ್ಕೆ ಸಂಪರ್ಕ ಕಡಿತಗೊಳಿಸಲಾಗಿದೆ ಎನ್ನಲಾಗಿದೆ. ಜಗದೀಶ ಶೆಟ್ಟರ ಸಿಎಂ ಆಗಿದ್ದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಈ ಸೇವೆ ಆರಂಭಿಸಲಾಯಿತು. ಮೊದಲ ಕೇಂದ್ರ ಹುಬ್ಬಳ್ಳಿಯ ಐಟಿ ಪಾರ್ಕ್‌ನಲ್ಲಿ 2013ರಲ್ಲಿ ಆರಂಭವಾದರೆ, 2018ರಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು. ಹೈದರಾಬಾದ್‌ ಮೂಲದ ಕಂಪನಿ ಇದನ್ನು ನಿರ್ವಹಿಸುತ್ತಿದ್ದು, ವಾರದಿಂದ ಬೆಂಗಳೂರು, ಹುಬ್ಬಳ್ಳಿ ಕೇಂದ್ರದ ಸೇವೆಗಳು ಸ್ಥಗಿತಗೊಂಡಿವೆ.

Advertisement

ಬಾಕಿ ಹಿನ್ನೆಲೆ ಸಂಪರ್ಕ ಕಡಿತ: ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ, ಸರ್ಕಾರಿ ಆರೋಗ್ಯ ಸಂಸ್ಥೆಗಳ ಮಾಹಿತಿ, ಸಲಹೆ ಕೋರಿ ಕೋವಿಡ್‌ ಪೂರ್ವದಲ್ಲಿ ನಿತ್ಯ 17,000- 20,000 ಕರೆಗಳು ಬರುತ್ತಿದ್ದವು. ಇದೀಗ ಬಿಎಸ್ಸೆನ್ನೆಲ್‌ನಿಂದ ಪಡೆದ ಇಂಟರ್‌ನೆಟ್‌ ಹಾಗೂ ಕರೆ ಸಂಪರ್ಕ ಸೇವೆಗೆ ಅಂದಾಜು 25 ಲಕ್ಷ ರೂ. ಬಿಲ್‌ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಳಿಸಲಾಗಿದೆ ಎನ್ನಲಾಗುತ್ತಿದೆ. ಇನ್ನು ತಾಂತ್ರಿಕ ಪಾಲುದಾರ ಕಂಪನಿಗೂ ನಾಲ್ಕು ತಿಂಗಳಿನಿಂದ ಬಿಲ್‌ ಪಾವತಿ ಮಾಡಿಲ್ಲ. ಇದರಿಂದ ಅಲ್ಲಿನ ಐಟಿ ಸಿಬ್ಬಂದಿಗೂ ವೇತನ
ಆಗುತ್ತಿಲ್ಲ. ಈ ವ್ಯವಸ್ಥೆಯಿಂದ ರಾಜ್ಯದ ಜನರಿಗೆ ತುಂಬಾ ನೆರವಾಗುತ್ತಿದೆ ಎನ್ನುವ ಕಾರಣಕ್ಕೆ 181 ಮಹಿಳಾ ಸಹಾಯವಾಣಿ ಇಲ್ಲಿಯೇ ಆರಂಭಿಸಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ರಾಜ್ಯದ
ಜನರಿಗೆ ಅಗತ್ಯ ಸಲಹೆ, ಮಾಹಿತಿ ನೀಡುವುದಕ್ಕಾಗಿ ಇದೇ ಕೇಂದ್ರಗಳಲ್ಲಿ ಆರಂಭಿಸಿದ್ದ 14410 ಆಪ್ತಮಿತ್ರ ಹಾಗೂ 1075 ಕೋವಿಡ್‌ ಕೇಂದ್ರೀಕೃತ ಸಹಾಯವಾಣಿ ಸೇವೆ ಕೂಡ ದೊರೆಯುತ್ತಿಲ್ಲ. ಕೋವಿಡ್‌ ಎರಡು ಅಲೆಗಳ ಸಂದರ್ಭದಲ್ಲಿ ಆರೋಗ್ಯ ಸಲಹೆ, ಅಗತ್ಯ ಮಾಹಿತಿಯೊಂದಿಗೆ ಸ್ಥೈರ್ಯ ತುಂಬುವ ಕೆಲಸ ಈ ಸಹಾಯವಾಣಿ ಮೂಲಕ ಆಗಿದೆ. ಇದೀಗ ರಾಜ್ಯದಲ್ಲಿ ಒಮಿಕ್ರಾನ್‌ ಭೀತಿ ಬಗ್ಗೆ ಯಾವುದೇ ಮಾಹಿತಿ, ಸಲಹೆ ಇಲ್ಲದಂತಾಗಿದೆ. ಇದರೊಂದಿಗೆ ಇತರೆ ಆರೋಗ್ಯ ಸಮಸ್ಯೆಗಳಿಗೂ ನೆರವು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ಹೂಡಿಕೆದಾರರ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಏರಿಳಿಕೆ

ಯೋಜನೆ ಸ್ಥಗಿತದ ಹುನ್ನಾರವೇ?
ಕೋವಿಡ್‌ ಎರಡು ಅಲೆ ಸಂದರ್ಭದಲ್ಲಿ ಎರಡು ಕೇಂದ್ರಗಳಿಂದ ಎಲ್ಲಾ ಸಹಾಯವಾಣಿ ಸಂಖ್ಯೆಗಳಿಂದ ನಿತ್ಯ 40-50 ಸಾವಿರ ಕರೆಗಳು ಬರುತ್ತಿದ್ದವು. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಗತ್ಯ ವ್ಯವಸ್ಥೆ ಸ್ಥಗಿತಗೊಳಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ. 2014ರಲ್ಲಿ ಇದೊಂದು ಬೋಗಸ್‌ ಯೋಜನೆ, ಇದಕ್ಕಾಗಿ ವೆಚ್ಚ ಮಾಡುವುದು ವ್ಯರ್ಥ್ಯ ಎಂದು ಅಂದಿನ ಮುಖ್ಯ ಆರ್ಥಿಕ ಸಲಹೆಗಾರ ವರದಿ ನೀಡಿದ್ದರು. ಹೀಗಾಗಿ ಅಂದಿನ ಸರ್ಕಾರ ಅನುದಾನ ಸ್ಥಗಿತಗೊಳಿಸುವ ಕೆಲಸಕ್ಕೆ ಮುಂದಾಗಿತ್ತು. ಅನುದಾನ ಕಡಿಮೆ ಮಾಡಿ ನಂತರ ಹೆಚ್ಚಿಸುವ ಕೆಲಸ ಆಗಿತ್ತು. ಇದೀಗ ಅಂತಹದೇ ಕೆಲಸ ನಡೆಯುತ್ತಿದೆಯೇ ಎಂಬುದು ಇಲ್ಲಿನ ಸಿಬ್ಬಂದಿ ಆತಂಕವಾಗಿದೆ.

ಸರಾಗವಾಗಿ ನಡೆಯುತ್ತಿಲ್ಲ
ಕೋವಿಡ್‌ ಭತ್ಯೆ, ಸಕಾಲದಲ್ಲಿ ವೇತನ ಹಾಗೂ ಬಡ್ತಿಗೆ ಒತ್ತಾಯಿಸಿ ಎರಡೂ ಕೇಂದ್ರದ ಸಿಬ್ಬಂದಿ ಮುಷ್ಕರ ನಡೆಸಿದ್ದರು. ಭರವಸೆ ನೀಡಿದ ನಂತರ ಕರ್ತವ್ಯಕ್ಕೆ ಹಾಜರಾಗಿದ್ದರು. 15 ದಿನಗಳ
ಗಡುವು ಮುಗಿದರೂ ಭರವಸೆ ಈಡೇರಿಲ್ಲ. ಕಳೆದ ಎರಡು ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ. ಸರ್ಕಾರದಿಂದ ಅನುದಾನ ಬಂದರೂ ಗುತ್ತಿಗೆ ಪಡೆದಿರುವ ಸಂಸ್ಥೆ ಸೂಕ್ತ ಸೌಲಭ್ಯ
ನೀಡುತ್ತಿಲ್ಲ. ಈ ವ್ಯವಸ್ಥೆಗೆ ಇತಿಶ್ರೀ ಹಾಡಲು ವ್ಯವಸ್ಥಿತ ಸಂಚು ಹೂಡಿದ್ದಾರೆ ಎನ್ನುವುದು ಇಲ್ಲಿನ ಸಿಬ್ಬಂದಿ ದೂರು.

Advertisement

ಈಗಾಗಲೇ ಬಿಎಸ್ಸೆನ್ನೆಲ್‌ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದೇವೆ. ಆದಷ್ಟು ಶೀಘ್ರದಲ್ಲಿ ದುರಸ್ತಿ ಮಾಡುವುದಾಗಿ ತಿಳಿಸಿದ್ದಾರೆ. ಬಿಲ್‌ ಬಾಕಿ ಪ್ರಶ್ನೆಯಿಲ್ಲ. ಸರ್ಕಾರದಿಂದ ಬಿಲ್‌ ಮಂಜೂರಾಗಿ ಬಂದಿದೆ.
– ಪ್ರಭುದೇವಗೌಡ, ನೋಡಲ್‌ ಅಧಿಕಾರಿ, 104 ಆರೋಗ್ಯವಾಣಿ

– ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next