ನವದೆಹಲಿ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನಾಪಡೆ ಕದನವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾಪಡೆ(ಬಿಎಸ್ ಎಫ್)ಯ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿರುವ ಘಟನೆ ಶುಕ್ರವಾರ(ನವೆಂಬರ್ 13, 2020) ನಡೆದಿದೆ.
ಅಷ್ಟೇ ಅಲ್ಲ ಪಾಕ್ ಸೇನಾ ದಾಳಿಗೆ ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದ ಕಮಲ್ ಕೋಟೆ ಸೆಕ್ಟರ್ ಪ್ರದೇಶದಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ.
ಗಡಿ ಪ್ರದೇಶದಲ್ಲಿ ಪಾಕ್ ಪಡೆಯ ಗುಂಡು ಸಬ್ ಇನ್ಸ್ ಪೆಕ್ಟರ್ ತಲೆಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ ಬಿಎಸ್ ಎಫ್ ಸಬ್ ಇನ್ಸ್ ಪೆಕ್ಟರ್ ರಾಕೇಶ್ ಡೋಬ್ಬಾಲ್ ಪ್ರತಿದಾಳಿ ನಡೆಸಿದ್ದರು. ಈ ವೇಳೆ ಪಾಕ್ ಪಡೆಯ ಗುಂಡು ಅವರ ತಲೆಯೊಳಕ್ಕೆ ಹೊಕ್ಕಿದ್ದು, ಸ್ಥಳದಲ್ಲಿಯೇ ಹುತಾತ್ಮರಾಗಿರುವುದಾಗಿ ವರದಿ ತಿಳಿಸಿದೆ.
ರಾಕೇಶ್ ಡೋಬ್ಬಾಲ್ ಅವರು ಉತ್ತರಾಖಂಡದ ರಿಷಿಕೇಶದ ಗಂಗಾ ನಗರದ ನಿವಾಸಿಯಾಗಿದ್ದಾರೆ. ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್ ಪಡೆ ಗುಂಡಿನ ದಾಳಿಯನ್ನು ಮುಂದುವರಿಸಿದ್ದು, ಭಾರತೀಯ ಸೇನಾಪಡೆ ತಕ್ಕ ಪ್ರತಿದಾಳಿ ನಡೆಸುತ್ತಿರುವುದಾಗಿ ತಿಳಿಸಿದೆ.
ಬಾರಾಮುಲ್ಲಾ ಜಿಲ್ಲೆಯ ನಂಬ್ಲಾ ಸೆಕ್ಟರ್ ಸಮೀಪದ ಪಾಕ್ ಪಡೆ ಕದನ ವಿರಾಮ ಉಲ್ಲಂಘಿಸಿ ಮೋರ್ಟಾರ್ಸ್ ಹಾಗೂ ಶೆಲ್ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು.
ಇದನ್ನೂ ಓದಿ:ಅಲ್-ಖೈದಾದಿಂದ ಪ.ಬಂಗಾಳದಲ್ಲಿ ಉಗ್ರ ದಾಳಿಗೆ ಸಂಚು: ಗುಪ್ತಚರ ಸಂಸ್ಥೆಯಿಂದ ಮುನ್ನೆಚ್ಚರಿಕೆ