ಚಂಡೀಗಢ: ಭಾರತ-ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಯತ್ನವನ್ನು ಬಿಎಸ್‌ಎಫ್ ಯೋಧರು ಶನಿವಾರ ವಿಫಲಗೊಳಿಸಿದ್ದಾರೆ. ಇದೇ ವೇಳೆ 20 ಪ್ಯಾಕೆಟ್ ಹೆರಾಯಿನ್, ಬಂದೂಕುಗಳು ಮತ್ತು ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಖಸವಾಲಿ ಗ್ರಾಮದಲ್ಲಿ ದಟ್ಟ ಮಂಜು ಆವೃತ ಮುಂಜಾನೆ 5.30ರ ವೇಳೆಗೆ ಬಿಎಸ್‌ಎಫ್ ಯೋಧರು ಗಸ್ತು ತಿರುಗುತ್ತಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಕಳ್ಳಸಾಗಣೆದಾರರು ಸಂಚರಿಸುತ್ತಿರುವುದು ಕಂಡುಬಂದಿದೆ. ಎಚ್ಚರಿಕೆ ನೀಡಿದ ಕೂಡಲೇ ಕಳ್ಳಸಾಗಣೆದಾರರು ಗುಂಡು ಹಾರಿಸಲು ಆರಂಭಿಸಿದ್ದಾರೆ.
ಪ್ರತಿಯಾಗಿ ಬಿಎಸ್‌ಎಫ್ ಯೋಧರು ದಾಳಿ ನಡೆಸಿದ್ದಾರೆ. ಈ ವೇಳೆ 25 ಸುತ್ತುಗಳ ಫೈರಿಂಗ್ ಆಗಿದೆ. ನಂತರ ಕಳ್ಳಸಾಗಣೆದಾರರು ಪಾಕ್ ಕಡೆಗೆ ಪರಾರಿಯಾಗಿದ್ದಾರೆ.
ಶೋಧ ನಡೆಸಿದಾಗ ಹೆರಾಯಿನ್, ಟರ್ಕಿ ಮತ್ತು ಚೀನ ನಿರ್ಮಿತ ಬಂದೂಕುಗಳು, 6 ಮಾಗಜಿನ್‌ಗಳು ಮತ್ತು 242 ಜೀವಂತ ಗುಂಡುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.