ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಬೃಹತ್ ಪ್ರತಿಭಟನೆಗಳಿಗೆ ಸಾಕ್ಷಿಯಾಗಿ ಹಿಂಸಾಚಾರ ಸಂಭವಿಸಿ ಕಳವಳಕಾರಿ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ (BSF) ಸೋಮವಾರ 4,096-ಕಿಮೀ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ “ಹೈ ಅಲರ್ಟ್” ಘೋಷಿಸಿದೆ.
ಬಿಎಸ್ಎಫ್ ಮಹಾನಿರ್ದೇಶಕ (ಹಂಗಾಮಿ) ದಲ್ಜಿತ್ ಸಿಂಗ್ ಚೌಧರಿ ಅವರು ಹಿರಿಯ ಕಮಾಂಡರ್‌ಗಳು ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಕೋಲ್ಕತಾಕ್ಕೆ ಬಂದಿಳಿದಿದ್ದಾರೆ ಎಂದು ಹೇಳಿದ್ದಾರೆ.
ಗಡಿ ಭದ್ರತೆಗೆ ಸೇನಾ ಪಡೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದ ಗಡಿಯಲ್ಲಿ ನಿಯೋಜಿಸಲಾದ ಎಲ್ಲಾ ಸಿಬಂದಿಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಎಲ್ಲಾ ಘಟಕಗಳಿಗೂ ಹೈ ಅಲರ್ಟ್ ಘೋಷಿಸಲು ಹೇಳಲಾಗಿದೆ.
ಇದನ್ನೂ ಓದಿ: Bangladesh Crisis; ಭಾರತಕ್ಕೆ ಬಂದ ಶೇಖ್ ಹಸೀನಾ; ಲಂಡನ್‌ಗೆ ತೆರಳುವ ಸಾಧ್ಯತೆ
ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ದೆಹಲಿ ಪೊಲೀಸರು ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.ಹಸೀನಾ ಅವರು ರಾಷ್ಟ್ರ ರಾಜಧಾನಿಗೆ ಬಂದಿಳಿದ ಕಾರಣ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೂ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೇಖ್ ಹಸೀನಾ ಅವರು ಹಿಂದೋನ್ ಏರ್ ಬೇಸ್‌ನಲ್ಲೇ ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ಮತ್ತು ಅವರ ಮುಂದಿನ ಕ್ರಮದ ಕುರಿತು ಎನ್‌ಎಸ್‌ಎ ಮುಖ್ಯಸ್ಥ ಅಜಿತ್ ದೋವಲ್ ಅವರೊಂದಿಗೆ ಚರ್ಚೆ ನಡೆಸಿದರು. ಭಾರತೀಯ ವಾಯುಪಡೆಯು ತನ್ನ ಸಿಬಂದಿಯನ್ನು ಪ್ರತಿ ಪೂರ್ವ ವಲಯದಲ್ಲಿ ಅಲರ್ಟ್‌ನಲ್ಲಿ ಇರಿಸಿದೆ.
ಬಾಂಗ್ಲಾದೇಶದ ತೀವ್ರ ಬಿಕ್ಕಟ್ಟಿನ ಬಳಿಕ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಳ್ಳುತ್ತಿದ್ದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಸ್-ಜಮಾನ್ ಸೋಮವಾರ ಅಧಿಕಾರ ಹಿಡಿಯಲಿದ್ದಾರೆ.