ಜಮ್ಮು : ಜಮ್ಮು ಮತ್ತು ಸಾಂಬಾ ಜಿಲ್ಲೆಯ ಮೂರು ವಲಯಗಳಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಭಾರತೀಯ ಸೇನೆಯ ಹೊರ ಠಾಣೆಗಳನ್ನು ಗುರಿ ಇರಿಸಿ ಪಾಕ್ ರೇಂಜರ್‌ಗಳು ಭಾರೀ ಗುಂಡಿನ ಮತ್ತು ಶೆಲ್ ದಾಳಿ ನಡೆಸಿದ ಪರಿಣಾಮವಾಗಿ ಓರ್ವ ಹದಿಹರೆದಯದ ಹುಡುಗಿ ಮತ್ತು ಓರ್ವ ಬಿಎಸ್‌ಎಫ್ ಜವಾನ ಮೃತಪಟ್ಟು ಇತರ ಎಂಟು ಮಂದಿ ಗಾಯಗೊಂಡರೆಂದು ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.
ನಿನ್ನೆ ಬುಧವಾರ ರಾತ್ರಿ 9 ಗಂಟೆಯ ಬಳಿಕ ಪಾಕ್ ರೇಂಜರ್‌ಗಳು ಆರ್ ಎಸ್ ಪುರ, ಆರ್ನಿಯಾ ಮತ್ತು ರಾಮಗಢ ವಲಯದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರೀ ಗುಂಡಿನ ಹಾಗೂ ಶೆಲ್ ದಾಳಿ ನಡೆಸಿದರು.
ಪಾಕ್ ರೇಂಜರ್‌ಗಳು ಭಾರತೀಯ ಸೇನಾ ಹೊರ ಠಾಣೆಗಳನ್ನು ಮಾತ್ರವಲ್ಲದೆ ಸುಮಾರು 20 ಗಡಿ ಭಾಗದ ಗ್ರಾಮಗಳನ್ನು ಗುರಿ ಇರಿಸಿ ರಾತ್ರಿ ಪೂರ್ತಿ ಗುಂಡಿನ ದಾಳಿ ನಡೆಸಿದರು. ಭಾರತೀಯ ಸೇನೆ ಇದಕ್ಕೆ ಅತ್ಯಂತ ಪ್ರಖರವಾದ ಪ್ರತೀಕಾರದ ದಾಳಿ ನಡೆಸಿತು ಎಂದು ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.
ಪಾಕ್ ರೇಂಜರ್‌ಗಳ ಈ ಅಪ್ರಚೋದಿತ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಜವಾನ ಮತ್ತು 17 ವರ್ಷ ಪ್ರಾಯದ ಹುಡುಗಿಯೊಬ್ಬಳು ಸಾವಿಗೀಡಾದರು; ಐದು ಪೌರರು ಗಾಯಗೊಂಡರು.
ಮೃತ ಬಿಎಸ್‌ಎಫ್ ಜವಾನನ್ನು 78ನೇ ಬೆಟಾಲಿಯನ್‌ನ ಹೆಡ್ ಕಾನ್‌ಸ್ಟೆಬಲ್ ಎ ಸುರೇಶ್ ಎಂದು ಗುರುತಿಸಲಾಗಿದೆ. ಹತಳಾದ ಬಾಲಕಿಯನ್ನು ನೀಲಂ ದೇವಿ ಎಂದು ಗುರುತಿಸಲಾಗಿದೆ.