ಅಮೃತಸರ: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ, ರವಿವಾರ ಸರ್ವೀಸ್ ರೈಫಲ್‌ನಿಂದ ಸಹೋದ್ಯೋಗಿಗಳ ಮೇಲೆಯೇ ಗುಂಡು ಹಾರಿಸಿ, ನಾಲ್ವರ ಸಾವಿಗೆ ಕಾರಣರಾಗಿದ್ದಾರೆ. ಬಿಎಸ್ ಎಫ್ ಯೋಧ ಕನ್ನಡಿಗ, ಹುಕ್ಕೇರಿ ತಾಲೂಕಿನ ಯಮಕನಮರಡಿಯ ನಿವಾಸಿ ಎಂಬ ಅಂಶ ತಿಳಿದು ಬಂದಿದೆ.
ಇದನ್ನೂ ಓದಿ:ರಷ್ಯಾ, ಉಕ್ರೇನ್ ಭೀಕರ ಯುದ್ಧ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಮಹಾಪತನ, ಭಾರೀ ನಷ್ಟ
ಕೃತ್ಯ ಎಸಗಿರುವ ಯೋಧ ಸಾತೆಪ್ಪ ಎಸ್.ಕೆ. ಅವರೂ ಅಸುನೀಗಿದ್ದಾರೆ. ಪಂಜಾಬ್‌ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿಎಸ್‌ಎಫ್ ಕ್ಯಾಂಪ್ ನಲ್ಲಿ ರವಿವಾರ ಘಟನೆ ನಡೆದಿದೆ.
ನಾಲ್ವರನ್ನು ಗುಂಡಿಕ್ಕಿ ಕೊಂದ ಬಳಿಕ, ಯೋಧ ಸಾತೆಪ್ಪ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಘಟನೆಯಲ್ಲಿ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರತ ಮತ್ತು ಪಾಕಿಸ್ಥಾನ ಗಡಿ ಪ್ರದೇಶ ಅಟ್ಟಾರಿ- ವಾಘಾದಿಂದ 12-13 ಕಿ.ಮೀ. ದೂರದಲ್ಲಿ ಈ ಕ್ಯಾಂಪ್ ಇದೆ. ಸಾತೆಪ್ಪ ಅವರಿಗೆ ತಮಗೆ ನೀಡಿದ್ದ ಕರ್ತವ್ಯದ ಅವಧಿ ಬಗ್ಗೆ ಅಸಮಾಧಾನವಿತ್ತು. ಇದೇ ಕಾರಣದಲ್ಲಿ ಜಗಳ ನಡೆದು, ಗುಂಡು ಹಾರಿಸಿರ ಬಹುದು ಎಂದು ಹಿರಿಯ ಅಧಿಕಾರಿ ಗಳು ಶಂಕಿಸಿದ್ದಾರೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಬಗ್ಗೆ ಸೇನೆಯು ತನಿಖೆಗೆ ಆದೇಶಿಸಿದೆ.