Advertisement

ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ : 10 ದಿನಗಳಲ್ಲಿ ಪತ್ತೆಯಾದ 2ನೇ ಸುರಂಗ

07:49 PM Jan 23, 2021 | Team Udayavani |

ಜಮ್ಮು: ಉಗ್ರರ ಒಳನುಸುಳುವಿಕೆಗೆ ಪಾಕಿಸ್ತಾನವು ಗಡಿಯಲ್ಲಿ ತನ್ನ ಕುತಂತ್ರವನ್ನು ಮುಂದುವರಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನಿರ್ಮಿಸಲಾಗಿದ್ದ ಮತ್ತೂಂದು ಸುರಂಗವನ್ನು ಶನಿವಾರ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಪತ್ತೆಹಚ್ಚಿದೆ.

Advertisement

ಇದು ಕಳೆದ 10 ದಿನಗಳಲ್ಲಿ ಪತ್ತೆಯಾಗುತ್ತಿರುವ 2ನೇ ಸುರಂಗವಾಗಿದ್ದು, ಕಳೆದ 6 ತಿಂಗಳಲ್ಲಿ ಒಟ್ಟಾರೆ 4 ಸುರಂಗಗಳು ಪತ್ತೆಯಾದಂತಾಗಿವೆ.

ಹಿರಾನಗರ ವಲಯದ ಪನ್ಸಾರ್‌ ಪ್ರದೇಶದ ಗಡಿ ಠಾಣೆಯಲ್ಲಿ ಸುರಂಗ ನಿಗ್ರಹ ಕಾರ್ಯಾಚರಣೆ ವೇಳೆ ಈ ರಹಸ್ಯ ಸುರಂಗ ಬಿಎಸ್‌ಎಫ್ನ ಕಣ್ಣಿಗೆ ಬಿದ್ದಿದೆ. ಇದು 150 ಮೀಟರ್‌ ಉದ್ದ ಮತ್ತು 30 ಅಡಿ ಆಳವಿದ್ದು, 3 ಅಡಿಗಳಷ್ಟು ಅಗಲವಿದೆ. ಜ.13ರಂದು 150 ಮೀಟರ್‌ ಉದ್ದದ ಸುರಂಗವೊಂದು ಬಾಬಿಯಾನ್‌ ಗ್ರಾಮದಲ್ಲಿ ಪತ್ತೆಯಾಗಿತ್ತು. ಅಲ್ಲದೆ, 2020ರ ಜೂನ್‌ ತಿಂಗಳಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊತ್ತು ಬಂದಿದ್ದ ಪಾಕಿಸ್ತಾನದ ಹೆಕ್ಸಾ ಕಾಪ್ಟರ್‌ ಅನ್ನು ಸೇನೆಯು ಇದೇ ಪ್ರದೇಶದಲ್ಲಿ ಹೊಡೆದುರುಳಿಸಿದ್ದರು ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರ:  ಖಾಡ್ಕಿ ಘಾಟ್‌ ನಲ್ಲಿ ಪ್ರಪಾತಕ್ಕೆ ಬಿದ್ದ ವಾಹನ: 6 ಸಾವು, 18 ಮಂದಿ ಗಾಯ

ಉಗ್ರರ ಅಡಗುತಾಣ ಪತ್ತೆ:
ಇನ್ನು, ಪೂಂಛ್ ಜಿಲ್ಲೆಯಲ್ಲಿ ಶನಿವಾರ ಉಗ್ರರ ಅಡಗುತಾಣವೊಂದನ್ನು ಬಿಎಸ್‌ಎಫ್ ಯೋಧರು ಪತ್ತೆಹಚ್ಚಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದಲ್ಲಿ ಯೋಧರು ಇಲ್ಲಿ ಶೋಧ ಕಾರ್ಯ ಆರಂಭಿಸಿದಾಗ, ಅಡಗುತಾಣದಲ್ಲಿ ಒಂದು ಎಕೆ 47 ರೈಫ‌ಲ್‌, 3 ಮ್ಯಾಗಜಿನ್‌, 82 ರೌಂಡ್ಸ್‌, ಮೂರು ಚೈನೀಸ್‌ ಪಿಸ್ತೂಲುಗಳು, ನಾಲ್ಕು ಹ್ಯಾಂಡ್‌ ಗ್ರೆನೇಡ್‌ಗಳು ಪತ್ತೆಯಾಗಿವೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next