ಮುಂಬಯಿ : ಪ್ರಖ್ಯಾತ ರೇಟಿಂಗ್ ಸಂಸ್ಥೆ ಮೂಡಿ ಭಾರತದ ರೇಟಿಂಗ್ ಮೇಲ್ದರ್ಜೆಗೆ ಏರಿಸಿದ ಕಾರಣ ಹೊಸ ಹುರುಪು ಪಡೆದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 414 ಅಂಕಗಳ ಭರ್ಜರಿ ನೆಗೆತವನ್ನು ದಾಖಲಿಸಿ 33,521 ಅಂಕಗಳ ಮಟ್ಟಕ್ಕೆ ಜಿಗಿಯಿತು.
ಮೂಡಿ ಬಲದಲ್ಲಿ ಡಾಲರ್ ಎದುರು ರೂಪಾಯಿ 69 ಪೈಸೆಯ ಜಿಗಿತ ಸಾಧಿಸಿರುವುದು ಕೂಡ ಮುಂಬಯಿ ಶೇರು ಪೇಟೆಗೆ ಇನ್ನಷ್ಟು ಉತ್ತೇಜನ ನೀಡಿತು.
ಬ್ಯಾಂಕಿಂಗ್ ಸ್ಟಾಕ್‌ಗಳ ಪೈಕಿ ಎಸ್‌ಬಿಐ ಶೇರು ಶೇ.2.94ರಷ್ಟು ಏರಿತಾದರೆ ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಡ್ ಶೇ.3.07ರ ಜಿಗಿತವನ್ನು ದಾಖಲಿಸಿದವು.
ಬ್ಯಾಂಕಿಂಗ್, ರಿಯಲ್ಟಿ ಮತ್ತು ಮೆಟಲ್ ಸೇರಿದಂತೆ ಹೆಚ್ಚಿನೆಲ್ಲ ರಂಗದ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಭರಾಟೆಯ ಖರೀದಿಯನ್ನು ಕಂಡವು.
ರಾಷ್ಟೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯ 124.40 ಅಂಕಗಳ ಜಿಗಿತವನ್ನು ಸಾಧಿಸಿ 10,339.15ರ ಮಟ್ಟಕ್ಕೆ ಏರಿತು.
ಭಾರತದ ಸೊವರೀನ್ ಕ್ರೆಡಿಟ್ ರೇಟಿಂಗನ್ನು ಮೂಡಿ ಇಂದು ಬಿಎಎ2 ಮಟ್ಟಕ್ಕೆ ಏರಿಸಿ, ಸರಕಾರ ಮಾಡಿರುವ ಆರ್ಥಿಕ ಮತ್ತು ಸಾಂಸ್ಥಿಕ ಸುಧಾರಣೆಗಳ ಕಾರಣ ಭಾರತಕ್ಕೆ ಸದೃಢ ಭವಿಷ್ಯ ಇರುವುದನ್ನು ಸಾರಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 409.80 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 33,474.51ರ ಅಂಕಗಳ ಮಟ್ಟದಲ್ಲೂ, ನಿಫ್ಟಿ ಸೂಚ್ಯಂಕ 113 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 10,327.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.