ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 500ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.
ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಅನಿರೀಕ್ಷಿತ ರಾಜೀನಾಮೆ, ಡಾಲರ್ ಎದುರು ರೂಪಾಯಿಯ 110 ಪೈಸೆ ಕುಸಿತ, ಪಂಚ ರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಆಗಬಹುದಾದ ಹಿನ್ನಡೆಯೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆ ಇಂದು ತೀವ್ರವಾಗಿ ನಲುಗಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 356.09 ಅಂಕಗಳ ನಷ್ಟದೊಂದಿಗೆ 34,603.63 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 99 ಅಂಕಗಳ ನಷ್ಟದೊಂದಿಗೆ 10,389.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 110 ಪೈಸೆಗಳ ಕುಸಿತವನ್ನು ಕಂಡು 72.42 ರೂ. ಮಟ್ಟದಲ್ಲಿ ವ್ಯವಹಾರನಿರತವಾಗಿತ್ತು. ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಅನಿರೀಕ್ಷಿತ ರಾಜೀನಾಮೆಯೇ ರೂಪಾಯಿಯ ಇಂದಿನ ಭಾರೀ ಕುಸಿತಕ್ಕೆ ಕಾರಣವೆಂದು ತಿಳಿಯಲಾಗಿದೆ.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ರಿಲಯನ್ಸ್, ಕೋಟಕ್ ಮಹೀಂದ್ರ, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಎಸ್ ಬ್ಯಾಂಕ್, ಇಂಡಿಯಾಬುಲ್ಸ್ ಹೌಸಿಂಗ್, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್, ಏಶ್ಯನ್ ಪೇಂಟ್ಸ್; ಟಾಪ್ ಲೂಸರ್‌ಗಳು : ಎಚ್‌ಪಿಸಿಎಲ್, ಭಾರ್ತಿ ಏರ್‌ಟೆಲ್, ಎಚ್ ಡಿ ಎಫ್ ಸಿ ಬ್ಯಾಂಕ್, ಐಓಸಿ, ಟಾಟಾ ಸ್ಟೀಲ್.