ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ಸಮರ ಭೀತಿ ಮತ್ತೆ ಶೇರು ಮಾರುಕಟ್ಟೆಗಳನ್ನು ಕಾಡಲು ಆರಂಭಿಸಿದ್ದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 351.56 ಅಂಕಗಳ ಭಾರೀ ನಷ್ಟದೊಂದಿಗೆ 33,019.07 ಅಂಕಗಳ ಮಟ್ಟಕ್ಕೆ ಕುಸಿದು ಆತಂಕಕಾರಿಯಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 116.60 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,11.30 ಅಂಕಗಳ ಮಟ್ಟಕ್ಕೆ ಕುಸಿದು ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ನಿರಂತರ ಮೂರನೇ ದಿನದ ಏರಿಕೆಯ ರೂಪದಲ್ಲಿ 100 ಅಂಕಗಳ ಜಿಗಿತ ಸಾಧಿಸಿದ್ದ ಸೆನ್ಸೆಕ್ಸ್ 33,505.53 ಅಂಕಗಳ ಎತ್ತರವನ್ನು ಕಂಡಿತ್ತು. ಅನಂತರದಲ್ಲಿ ಮಾರಾಟ ಒತ್ತಡವು ತೀವ್ರತೆಯನ್ನು ಪಡೆದು ಶೇರು ಧಾರಣೆ ಜರ್ರನೆ ಇಳಿಯತೊಡಗಿತು.
ಅಮೆರಿಕ ಆಮದು ಸುಂಕವನ್ನು ಗಮನಾರ್ಹವಾಗಿ ಏರಿಸಿರುವುದಕ್ಕೆ ಪ್ರತಿಯಾಗಿ ಚೀನ ಕೂಡ ಅಷ್ಟೇ ಕಠಿನ ಕ್ರಮಕೈಗೊಳ್ಳಲು ಮುಂದಾದುದು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಭೀತಿ ಅಲೆಯನ್ನು ಸೃಷ್ಟಿಸಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,784 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,190 ಶೇರುಗಳು ಮುನ್ನಡೆ ಪಡೆದವು; 1,444 ಶೇರುಗಳು ಹಿನ್ನಡೆಗೆ ಗುರಿಯಾದವು; 150 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.