ಮುಂಬಯಿ : ಡಾಲರ್ ಎದುರು ರೂಪಾಯಿ ಚೇತರಿಕೆ, ಕೈಗಾರಿಕಾ ಉತ್ಪಾದನೆಯಲ್ಲಿ ಶೇ.6.6ರಷ್ಟು ಏರಿಕೆ ಮತ್ತು ಹಣದುಬ್ಬರ ಕಳೆದ ಹತ್ತು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದ ಕಾರಣ ಚಿಗುರೊಡೆದ ಮುಂಬಯಿ ಶೇರು ಮಾರುಕಟ್ಟೆ ಇಂದು ಶುಕ್ರವಾರ 372.68 ಅಂಕಗಳ ಭರ್ಜರಿ ಜಿಗಿತವನ್ನು ಸಾಧಿಸಿ 38,125.62 ಅಂಕಗಳ ಮಟ್ಟಕ್ಕೇರುವ ಸಾಧನೆ ಮಾಡಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 145.30 ಅಂಕಗಳ ಏರಿಕೆಯನ್ನು ಸಾಧಿಸಿ 11,515.20 ಅಂಕಗಳ ಮಟ್ಟಕ್ಕೇರುವ ಮೂಲಕ ದಿನದ ವಹಿವಾಟನ್ನು ಆಶಾದಾಯಕವಾಗಿ ಕೊನೆಗೊಳಿಸಿತು.
ಕಳೆದ ಬುಧವಾರ ಸೆನ್ಸೆಕ್ಸ್ 304.83 ಅಂಕಗಳ ಜಿಗಿತವನ್ನು ದಾಖಲಿಸಿತ್ತು. ಇಂದು ಡಾಲರ್ ಎದುರು ರೂಪಾಯಿ 65 ಪೈಸೆಗಳ ಏರಿಕೆಯನ್ನು ದಾಖಲಿಸಿ 71.53 ರೂ. ಮಟ್ಟಕ್ಕೆ ತಲುಪಿತು. ಇದೇ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲೂ ಸ್ವಲ್ಪ ಮಟ್ಟಿನ ಇಳಿಕೆ ಕಂಡು ಬಂತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,831 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,826 ಶೇರುಗಳು ಮುನ್ನಡೆ ಸಾಧಿಸಿದವು; 831 ಶೇರುಗಳು ಹಿನ್ನಡೆಗೆ ಗುರಿಯಾದವು; 174 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ವಾರದ ನೆಲೆಯಲ್ಲಿ ಸೆನ್ಸೆಕ್ಸ್ ನಿರಂತರ 2ನೇ ವಾರವೂ ನಷ್ಟವನ್ನು ದಾಖಲಿಸಿದೆ; ಸುಮಾರು 300 ಅಂಕಗಳನ್ನು ಕಳೆದುಕೊಂಡಿದೆ. ಇದೇ ರೀತಿಯ ನಿಫ್ಟಿ ಕೂಡ 74 ಅಂಕಗಳ ನಷ್ಟವನ್ನು ವಾರದ ನೆಲೆಯಲ್ಲಿ ಕಳೆದುಕೊಂಡಿದೆ.