ಮುಂಬಯಿ : ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರ ಏರಿಕೆ ಕೈಗೊಳ್ಳುವುದೆಂದು ನಿರೀಕ್ಷಿಸಲಾಗಿರುವ ನಡುವೆಯೇ ಹರಿದು ಬರುತ್ತಿರುವ ವಿದೇಶ ಹೂಡಿಕೆಯ ಬಲದಲ್ಲಿ ಮುನ್ನುಗ್ಗುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ , ಬೆಳಗ್ಗೆ 10.40ರ ಹೊತ್ತಿಗೆ 31.97 ಅಂಕಗಳ ಮುನ್ನಡೆಯನ್ನು ದಾಖಲಿಸಿ 29,474.60 ಅಂಕಗಳ ಮಟ್ಟಕ್ಕೇರಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11.30 ಅಂಕಗಳ ಏರಿಕೆಯನ್ನು ಕಂಡು 9,098.30 ಅಂಕಗಳ ಮಟ್ಟವನ್ನು ಏರಿತು.
ಹಾಗಿದ್ದರೂ ಚಿಲ್ಲರೆ ಹಣದುಬ್ಬರ ನಾಲ್ಕು ತಿಂಗಳ ಗರಿಷ್ಠವಾಗಿ ಶೇ.3.65ರ ಮಟ್ಟಕ್ಕೆ ಹಾಗೂ ಸಗಟು ಬೆಲೆ ಸೂಚ್ಯಂಕ 39 ತಿಂಗಳ ಗರಿಷ್ಠವಾಗಿ ಶೇ.6.55ರ ಮಟ್ಟಕ್ಕೆ ತರುಪಿರುವ ಕಾರಣ ಮುಂಬಯಿ ಶೇರು ಪೇಟೆ ಇಂದು ಎಚ್ಚರಿಕೆಯ ನಡೆಯನ್ನು ತೋರ್ಪಡಿಸಿತು.
ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ದಾಖಲಿಸಿದ ಪ್ರಚಂಡ ವಿಜಯದ ಬಲದಲ್ಲಿ ಮುಂಬಯಿ ಶೇರು ಪೇಟೆ ಕಳೆದ ಮೂರು ದಿನಗಳ ನಿರಂತರ ವಹಿವಾಟಿನಲ್ಲಿ ಒಟ್ಟು 540.69 ಅಂಕಗಳನ್ನು ಗಳಿಸಿರುವುದು ಗಮನಾರ್ಹವಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಏಶ್ಯನ್ ಶೇರುಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿಬಂದಿತ್ತು. ಶಾಂಘೈ ಸೂಚ್ಯಂಕ ಶೇ.0.10ರ ಏರಿಕೆಯನ್ನು ದಾಖಲಿಸಿತ್ತಾದರೆ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.18ರ ನಷ್ಟಕ್ಕೆ ಗುರಿಯಾಗಿತ್ತು. ಅಮೆರಿಕದ ಡೋವ್ ಜೋನ್ಸ್ ಸೂಚ್ಯಂಕ ನಿನ್ನೆ ಶೇ.0.21ರ ಹಿನ್ನಡೆಯನ್ನು ಕಂಡಿತ್ತು.