ಮುಂಬಯಿ : ಇತರ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ಇರುವುದನ್ನು ಕಡೆಗಣಿಸಿದ ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 93 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಐಟಿ, ಆಟೋ, ಟೆಕ್ ಮುಂತಾಗಿ ಹಲವು ರಂಗಗಳ ಶೇರುಗಳನ್ನು ವಹಿವಾಟುದಾರರು ಮಾರಲು ಮುಂದಾದ ಕಾರಣ ಸೆನ್ಸೆಕ್ಸ್ ನಿನ್ನೆಯ 577 ಅಂಕಗಳ ಏರಿಕೆಯ ಸ್ವಲ್ಪಾಂಶವನ್ನು ಬಿಟ್ಟುಕೊಟ್ಟಿತು. ಈ ರಂಗದ ಶೇರುಗಳು ಶೇ.1.06ರ ಕುಸಿತಕ್ಕೆ ಗುರಿಯಾದವು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ನಷ್ಟವನ್ನು 33.07 ಅಂಕಗಳಿಗೆ ಇಳಿಸಿಕೊಂಡು 33,563.73 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19.30 ಅಂಕಗಳ ನಷ್ಟದೊಂದಿಗೆ 10,305.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಐಸಿಐಸಿಐ ಬ್ಯಾಂಕ್, ಲೂಪಿನ್, ಎಸ್‌ಬಿಐ, ಟಾಟಾ ಮೋಟರ್, ಟಾಟಾ ಸ್ಟೀಲ್ ಶೇರಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಟಾ ಮೋಟರ್, ಇನ್‌ಫೋಸಿಸ್, ಲಾರ್ಸನ್, ಎಕ್ಸಿಸ್ ಬ್ಯಾಂಕ್, ಎಸ್‌ಬಿಐ, ಟಾಟಾ ಸ್ಟೀಲ್, ಹಿಂದುಸ್ಥಾನ್ ಯೂನಿಲಿವರ್, ಟಿಸಿಎಸ್, ಮಹೀಂದ್ರ, ವಿಪ್ರೋ, ಕೋಟಕ್ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಮಾರುತಿ ಸುಜುಕಿ ಶೇರುಗಳು ಶೇ.1.07ರಷ್ಟು ಕುಸಿದವು.