ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿಯನ್ನು ಅನುಲಕ್ಷಿಸಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 130 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ತೈಲ ಮತ್ತು ಅನಿಲ, ಲೋಹ, ವಿದ್ಯುತ್, ಪಿಎಸ್‌ಯು ಮತ್ತು ಐಟಿ ಶೇರುಗಳ ಭರಾಟೆಯ ಮಾರಾಟದ ಪರಿಣಾಮವಾಗಿ ಸೆನ್ಸೆಕ್ಸ್ ಹಿನ್ನಡೆಗೆ ಗುರಿಯಾಯಿತು. ವಿದೇಶೀ ಹೂಡಿಕೆಗಳು ಹಿಂದೆ ಸರಿಯುತ್ತಿರುವುದು ಕೂಡ ಸೆನ್ಸೆಕ್ಸ್ ಹಿನ್ನಡೆಗೆ ಕಾಣವಾಯಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 212.94 ಅಂಕಗಳ ನಷ್ಟದೊಂದಿಗೆ 33,472.60 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 64.20 ಅಂಕಗಳ ನಷ್ಟದೊಂದಿಗೆ 10,926.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಟಾಟಾ ಸ್ಟೀಲ್, ಎಸ್‌ಬಿಐ, ಎಚ್‌ಡಿಎಫ್ಸಿ, ಟಿಸಿಎಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು 3 ಪೈಸೆ ಕುಸಿದು 64.96 ರೂ. ಮಟ್ಟಕ್ಕೆ ಇಳಿಯಿತು. ನಿನ್ನೆ ಗುರುವಾರದ ವಹಿವಾಟಿನಲ್ಲಿ ರೂಪಾಯಿ ಡಾಲರ್ ಎದುರು 10 ಪೈಸೆಯಷ್ಟು ಕುಸಿದಿತ್ತು.