ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿಯ ನಡುವೆಯೇ ಇಂದು ಮಂಗಳವಾರ ಆರ್‌ಬಿಐ ತನ್ನ ಹಣಕಾಸು ನೀತಿ ಪರಾಮರ್ಶೆಯನ್ನು ಪ್ರಕಟಿಸಲಿರುವ ಕಾರಣ, ಮುಂಬಯಿ ಶೇರು ಪೇಟೆಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿದ ಪರಿಣಾಮವಾಗಿ ಸೆನ್ಸೆಕ್ಸ್ ತನ್ನ ಆರಂಭಿಕ ವಹಿವಾಟಿನಲ್ಲಿ 108 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಪವರ್, ಮೆಟಲ್, ಇನ್‌ಫ್ರಾಸ್ಟ್ರಕ್ಚರ್, ಕ್ಯಾಪಿಟಲ್ ಗೂಡ್ಸ್, ಐಟಿ, ಟೆಕ್, ಬ್ಯಾಂಕಿಂಗ್ ಮತ್ತು ಆಟೋ ಶೇರುಗಳು ಇಂದು ಮಾರಾಟದ ತೀವ್ರ ಒತ್ತಡಕ್ಕೆ ಗುರಿಯಾದವು. ನಿನ್ನೆಯ ಏರಿಳಿತಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 36.78 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದು ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 81.04 ಅಂಕಗಳ ನಷ್ಟಕ್ಕೆ ಗುರಿಯಾಗಿ 32,788.68 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 28.00 ಅಂಕಗಳ ನಷ್ಟದೊಂದಿಗೆ 10,099.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಇನ್‌ಫೋಸಿಸ್, ರಿಲಯನ್ಸ್, ಎಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಮತ್ತು ಎಸ್ ಬಿ ಐ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು 15 ಪೈಸೆಯ ಮುನ್ನಡೆ ಸಾಧಿಸಿ 64.22 ರೂ. ವಿನಿಮಯ ದರ ದಾಖಲಾದ ಹೊರತಾಗಿಯೂ ಮುಂಬಯಿ ಶೇರು ಪೇಟೆ ಕುಸಿತದ ಹಾದಿಯನ್ನು ಹಿಡಿದಿರುವುದು ವಿಶೇಷ.