ಮುಂಬಯಿ : ಜಾಗತಿಕ ಶೇರು ತಲ್ಲಣದಿಂದ ನಲುಗಿ ಆರು ದಿನಗಳ ನಷ್ಟದ ಬಳಿಕ ಇಂದು ಬುಧವಾರ ಕೊಂಚ ಮಟ್ಟಿನ ಚೇತರಿಕೆ ಕಂಡಿದ್ದ ಮುಂಬಯಿ ಶೇರು ಪೇಟೆ, ಆರ್‌ಬಿಐ ತನ್ನ ಬಡ್ಡಿದರವನ್ನು ಯಥಾವತ್ತಾಗಿ ಉಳಿಸಿಕೊಂಡ ಕಾರಣಕ್ಕೆ ನಿರಾಶೆಗೊಂಡು ದಿನದ ವಹಿವಾಟನ್ನು 113 ಅಂಕಗಳ ನಷ್ಟದೊಂದಿಗೆ 34,082.71 ಅಂಕಗಳ ಮಟ್ಟಕ್ಕೆ ಜಾರಿತು.
ಬಡ್ಡಿ ದರ ಕಡಿತ ಮಾಡದ ಆರ್‌ಬಿಐ, 2017-18ರ ಆರ್ಥಿಕ ಪ್ರಗತಿಯ ಅಂದಾಜನ್ನು ಶೇ.6.7ರಿಂದ ಶೇ.6.6ಕ್ಕೆ ಇಳಿಸಿದುದು ಶೇರು ಮಾರುಕಟ್ಟೆಗೆ ಇನ್ನೂ ದೊಡ್ಡ ನಿರಾಶೆ ಉಂಟುಮಾಡಿತು.
ಜಾಗತಿಕ ಶೇರು ಮಾರುಕಟ್ಟೆಗಳು ಇಂದು ಮತ್ತೆ ಚಿಗುರಿಕೊಂಡದ್ದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಬೆಳಗ್ಗಿನ ವಹಿವಾಟಿನಲ್ಲಿ 470 ಅಂಕಗಳ ಭರ್ಜರಿ ಜಂಪ್ ಸಾಧಿಸಿತ್ತು. ದಿನಾಂತ್ಯಕ್ಕೆ ನಷ್ಟದ ಹಾದಿ ಹಿಡಿದ ಸೆನ್ಸೆಕ್ಸ್ 113 ಅಂಕಗಳ ಕುಸಿತವನ್ನು ಕಂಡಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.55 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,476.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿ ನಿರಾಶೆ ಉಂಟುಮಾಡಿತು.
ಮುಂಬಯಿ ಶೇರು ಪೇಟೆಯಲ್ಲಿಂದು 2,868 ಶೇರುಗಳು ವಹಿವಾಟಿಗೆ ಒಳಪಟ್ಟವು; 1,988 ಶೇರುಗಳು ಮುನ್ನಡೆ ಸಾಧಿಸಿದವು; 786 ಶೇರುಗಳು ಹಿನ್ನಡೆಗೆ ಗುರಿಯಾದವು; 94 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.