ಮುಂಬಯಿ : ನಿರಂತರ ಎಂಟನೇ ದಿನವೂ ಗೆಲುವಿನ ಹಾದಿಯಲ್ಲಿ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 23.28 ಅಂಕಗಳ ಏರಿಕೆಯೊಂದಿಗೆ 38,386.75 ಅಂಕಗಳ ಮಟ್ಟದಲ್ಲಿ ಅತ್ಯುತ್ಸಾಹದಿಂದ ಕೊನೆಗೊಳಿಸಿತು.
ಸೆನ್ಸೆಕ್ಸ್‌ಗೆ ವ್ಯತಿರಿಕ್ತವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11.35 ಅಂಕಗಳ ಇಳಿಕೆಯೊಂದಿಗೆ ದಿನದ ವಹಿವಾಟನ್ನು 11,521.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಭಾರತೀಯ ಶೇರು ಮಾರುಕಟ್ಟೆಗೆ ವಿದೇಶಿ ಬಂಡವಾಳ ನಿರಂತರವಾಗಿ ಹರಿದು ಬರುತ್ತಿರುವುದು ಮತ್ತು ಅದರಿಂದಾಗಿ ದೇಶದ ವಾಣಿಜ್ಯ ಕೊರತೆ ಕಡಿಮೆಯಾಗುತ್ತಿರುವುದು, ಡಾಲರ್ ಎದುರು ರೂಪಾಯಿ ಬಲಗೊಳ್ಳುತ್ತಿರುವುದು – ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬರುತ್ತಿದೆ.
ಕಳೆದ ಏಳು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 1,500 ಅಂಕಗಳನ್ನು ಸಂಪಾದಿಸಿದೆ. ಇಂದಿನ ವಹಿವಾಟಿನಲ್ಲಿ ಇನ್‌ಫೋಸಿಸ್, ಅವಳಿ ಎಚ್ ಡಿ ಎಫ್ ಸಿ, ಎಲ್ ಆ್ಯಂಡ್ ಟಿ ಶೇರುಗಳು ಉತ್ತಮ ಮುನ್ನಡೆಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,852 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,112 ಶೇರುಗಳು ಮುನ್ನಡೆ ಸಾಧಿಸಿದವು; 1,561 ಶೇರುಗಳು ಹಿನ್ನಡೆಗೆ ಗುರಿಯಾದವು; 179 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.