ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಇಂದು ಬುಧವಾರ ಹೂಡಿಕೆದಾರರು ಮತ್ತು ವಹಿವಾಟುದಾರರು ಬ್ಯಾಂಕ್, ಆಟೋ, ಫಾರ್ಮಾ ಮತ್ತು ತೈಲ ಹಾಗೂ ಅನಿಲ ರಂಗದ ಶೇರುಗಳ ಖರೀದಿಯಲ್ಲಿ ಆಸಕ್ತಿ ತೋರಿದ ಕಾರಣ ಸೆನ್ಸೆಕ್ಸ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 158 ಅಂಕಗಳ ಜಿಗಿತವನ್ನು ಸಾಧಿಸಿ ಪ್ರಬಲ ಪುನರಾಗಮನವನ್ನು ಸಾರಿತು.
ವಾಲ್ ಸ್ಟ್ರೀಟ್ ಶೇರುಗಳು ನಿನ್ನೆಯ ದಿನದ ವಹಿವಾಟಿನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಏಶ್ಯನ್ ಶೇರು ಪೇಟೆಗಳಲ್ಲಿಂದು ಧನಾತ್ಮಕ ಸನ್ನಿವೇಶ ನೆಲೆಗೊಂಡಿತ್ತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 147.68 ಅಂಕಗಳ ಮುನ್ನಡೆಯೊಂದಿಗೆ 33,959.94 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 53.50 ಅಂಕಗಳ ಮುನ್ನಡೆಯೊಂದಿಗೆ 10,495.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಮಾರುತಿ ಸುಜುಕಿ, ಡಾ. ರೆಡ್ಡಿ, ವೇದಾಂತ ಮತ್ತು ಕೋಲ್ ಇಂಡಿಯಾ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯಲ್ಲಿ 2,520 ಕಂಪೆನಿಗಳ ಶೇರುಗಳ ವಹಿವಾಟಿಗೆ ಒಳಪಟ್ಟಿದ್ದವು. ಈ ಪೈಕಿ 1,842 ಶೇರುಗಳು ಮುನ್ನಡೆ ಸಾಧಿಸಿದರೆ 583 ಶೇರುಗಳು ಹಿನ್ನಡೆಗೆ ಗುರಿಯಾದವು; 95 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 244.57 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಡಾಲರ್ ಎದುರು ರೂಪಾಯಿ ಇಂದು ಎರಡೂವರೆ ವರ್ಷಗಳ ಎತ್ತರದ ಮಟ್ಟದಿಂದ ಕೆಳ ಜಾರಿ 8 ಪೈಸೆಯಷ್ಟು ಕುಗ್ಗಿ 63.56 ರೂ.ಗಳ ಮಟ್ಟದಲ್ಲಿ ಸ್ಥಿತವಾಯಿತು.