ಮುಂಬಯಿ : ಮೆಟಲ್, ಆಟೋ, ಕ್ಯಾಪಿಟಲ್ ಗೂಡ್ಸ್ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳ ಸಹಿತ ಮುಂಚೂಣಿ ವಲಯಗಳ ಶೇರುಗಳ ಖರೀದಿಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಆಸಕ್ತಿ ತೋರಿದ ಫಲವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 134 ಅಂಕಗಳ ಮುನ್ನಡೆಯೊಂದಿಗೆ 34,275.93 ಅಂಕಗಳ ಮಟ್ಟಕ್ಕೇರಿತು.
ವಾಲ್ ಸ್ಟ್ರೀಟ್ ಶೇರುಗಳು ಮುನ್ನಡೆ ಕಂಡದ್ದನ್ನು ಅನುಸರಿಸಿ ಏಶ್ಯನ್ ಶೇರು ಮಾರುಕಟ್ಟೆಗಳು ಕೂಡ ಮುನ್ನಡೆ ಸಾಧಿಸಿದವು. ಕಳೆದ ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 322.65 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ ತನ್ನ ಪ್ರತಾಪವನ್ನು ಮುಂದುವರಿಸಿ 263.12 ಅಂಕಗಳ ಮುನ್ನಡೆಯೊಂದಿಗೆ 34,405.27 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 78.40 ಅಂಕಗಳ ಮುನ್ನಡೆಯನ್ನು ಕಾಯ್ದಕೊಂಡು 10,569.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಭಾರ್ತಿ ಇನ್‌ಫ್ರಾಟೆಲ್, ಮಾರುತಿ ಸುಜುಕಿ, ಟಾಟಾ ಸ್ಟೀಲ್, ಸನ್ ಫಾರ್ಮಾ, ಟಾಟಾ ಮೋಟರ್ ಶೇರುಗಳು ಸಕ್ರಿಯವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ವಿನಿಮಯ ದರ ಆರು ಪೈಸೆಗಳಷ್ಟು ಸುಧಾರಿಸಿ 64.67 ರೂ. ಮಟ್ಟಕ್ಕೆ ಏರಿತು. ಇತರ ಸಾಗರೋತ್ತರ ಕರೆನ್ಸಿಗಳ ಎದುರು ಡಾಲರ್ ದೌರ್ಬಲ್ಯ ತೋರಿರುವುದರಿಂದ ಶೇರು ಮಾರುಕಟ್ಟೆಗಳು ಇಂದು ಗೆರಿಗೆದರಿರುವುದಾಗಿ ವಿಶ್ಲೇಷಕರು ಹೇಳಿದ್ದಾರೆ.