ಮುಂಬಯಿ: ಆರು ದಿನಗಳ ನಿರಂತರ ಕುಸಿತದ ಹಾದಿಯಲ್ಲಿ ಸಾಗಿ ಬಂದಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಬಿಕ ವಹಿವಾಟಿನಲ್ಲಿ 274 ಅಂಕಗಳ ಉತ್ತಮ ನೆಗೆತವನ್ನು ಸಾಧಿಸಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,200 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು. ಸೆನ್ಸೆಕ್ಸ್ ಕಳೆದ ಆರು ದಿನಗಳ ನಿರಂತರ ಸೋಲಿನ ಹಾದಿಯಲ್ಲಿ 1,412.66 ಅಂಕಗಳ ನಷ್ಟವನ್ನು ಅನುಭವಿಸಿದೆ.
ಶ್ವೇತ ಭವನ ತಾನು ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಆಮದು ಸುಂಕ ಹೇರುವ ಪ್ರಸ್ತಾವವನ್ನು ಸದ್ಯಕ್ಕೆ ಕೈಬಿಟ್ಟಿರುವುದಾಗಿ ಹೇಳಿರುವ ಕಾರಣ ಜಾಗತಿಕ ವಾಣಿಜ್ಯ ಸಮರ ನ್ಪೋಟಗೊಳ್ಳುವ ಭೀತಿ ಈಗ ಬಹುಮಟ್ಟಿಗೆ ನಿವಾರಣೆಯಾಗಿದೆ. ಹಾಗಾಗಿ ಏಶ್ಯನ್ ಶೇರು ಪೇಟೆಗಳಲ್ಲಿ ಇಂದು ತೇಜಿಯ ವಾತಾವರಣ ಕಂಡು ಬಂತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 33.79 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,066.88 ಅಂಕಗಳ ಮಟ್ಟದಲ್ಲೂ ನಿಫ್ಟಿ 4.60 ಮುನ್ನಡೆಯನ್ನು ಕಾಯ್ದುಕೊಂಡು 10,158.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್ ಬ್ಯಾಂಕ್, ಅದಾನಿ ಪೋರ್ಟ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ, ಇನ್‌ಫೋಸಿಸ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಸಕ್ರಿಯವಾಗಿದ್ದವು.