ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ಸಮರ ಭೀತಿ ಸ್ವಲ್ಪ ಮಟ್ಟಿಗೆ ದೂರವಾದಂತೆ ತೋರಿಬಂದ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 400 ಅಂಕಗಳ ಭಾರೀ ಜಿಗಿತವನ್ನು ದಾಖಲಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,250ರ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿತು.
ಆರ್‌ಬಿಐ ಹಣಕಾಸು ನೀತಿ ಇಂದು ಸಂಜೆಯ ವೇಳೆಗೆ ಪ್ರಕಟಗೊಳ್ಳಲಿದ್ದು ಹೂಡಿಕೆದಾರರು ಮತ್ತು ವಹಿವಾಟುದಾರರ ಕಣ್ಣು ಈಗ ಆರ್‌ಬಿಐ ಮೇಲೆ ನೆಟ್ಟಿದೆ.
ಬೆಳಗ್ಗೆ 11.30ರ ಹೊತ್ತಿಗೆ ಸೆನ್ಸೆಕ್ಸ್ 414.28 ಅಂಕಗಳ ಮುನ್ನಡೆಯೊಂದಿಗೆ 33,433.35 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 133.50 ಅಂಕಗಳ ಏರಿಕೆಯೊಂದಿಗೆ 10,261.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಸ್ಟೀಲ್, ಟಾಟಾ ಮೋಟರ್, ಐಸಿಐಸಿಐ ಬ್ಯಾಂಕ್, ಹಿಂಡಾಲ್ಕೊ ಮತ್ತು ವೇದಾಂತ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.