ಮುಂಬಯಿ : ಚೀನ ಜತೆಗಿನ ಅಮೆರಿಕದ ವಾಣಿಜ್ಯ ಸುಂಕ ಸಮರ ಮತ್ತೆ ತೀವ್ರಗೊಳ್ಳುವ ಸಾಧ್ಯತೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿರುವ ಕಾರಣ ಏಶ್ಯನ್ ಶೇರು ಪೇಟೆಗಳಲ್ಲಿ ಆತಂಕ ಮೂಡಿದ್ದು, ಆ ಪ್ರಕಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಎಚ್ಚರಿಕೆಯ ನಡೆ ತೋರಿ ಸಣ್ಣ ಮಟ್ಟದ ಹಿನ್ನಡೆಯನ್ನು ಕಂಡಿತು.
ಬೆಳಗ್ಗೆ 10.40ರ ಹೊತ್ತಿಗೆ ಸಾಧಾರಣ ಚೇತರಿಕೆ ಕಂಡ ಸೆನ್ಸೆಕ್ಸ್ 54.18 ಅಂಕಗಳ ಏರಿಕೆಯೊಂದಿಗೆ 35,408.26 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10.30 ಅಂಕಗಳ ಮುನ್ನಡೆಯೊಂದಿಗೆ 10,638.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 15 ಪೈಸೆಯ ನಷ್ಟಕ್ಕೆ ಗುರಿಯಾಗಿ 71.02 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ವಹಿವಾಟಿನಲ್ಲಿ ಬಜಾಜ್ ಆಟೋ, ಏಶ್ಯನ್ ಪೇಂಟ್ಸ್, ಟಾಟಾ ಸ್ಟೀಲ್, ವೇದಾಂತ, ಭಾರ್ತಿ ಏರ್‌ಟೆಲ್, ಹೀರೋ ಮೋಟೋ ಕಾರ್ಪ್, ಎಚ್‌ಯುಎಲ್, ಐಟಿಸಿ, ಮಹೀಂದ್ರ, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಶೇರುಗಳು ಶೇ.1.93 ರ ಕುಸಿತಕ್ಕೆ ಗುರಿಯಾದವು.
ಟಾಪ್ ಗೇನರ್‌ಗಳಾಗಿ ಎಸ್ ಬ್ಯಾಂಕ್, ಇನ್‌ಫೋಸಿಸ್, ಸನ್ ಫಾರ್ಮಾ, ಕೋಲ್ ಇಂಡಿಯಾ, ಟಾಟಾ ಮೋಟರ್, ಆರ್‌ಐಎಲ್, ಟಿಸಿಎಸ್, ಎಸ್‌ಬಿಐ ಮತ್ತು ಎಕ್ಸಿಸ್ ಬ್ಯಾಂಕ್ ಶೇರುಗಳು ಮುನ್ನಡೆ ಕಂಡವು.
ಹಾಲಿ ನವೆಂಬರ್ ತಿಂಗಳಲ್ಲಿ ಸೌದಿ ಅರೇಬಿಯ ತನ್ನ ತೈಲ ಉತ್ಪಾದನೆಯನ್ನು ಸಾರ್ವಕಾಲಿಕ ಎತ್ತರ ಮಟ್ಟಕ್ಕೆ ಒಯ್ದಿರುವ ಕಾರಣ ಕಚ್ಚಾ ತೈಲ ಬೆಲೆ ಗಮನಾರ್ಹವಾಗಿ ಇಳಿದಿರುವುದು ಭಾರತಕ್ಕೆ ವರವಾಗಿ ಪರಿಣಮಿಸಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.