ಮುಂಬಯಿ : ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಇಂದು ತನ್ನ ಬಡ್ಡಿ ದರ ನೀತಿಯನ್ನು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಮಿಶ್ರ ಜಾಗತಿಕ ಪ್ರತಿಕ್ರಿಯೆ ತೋರಿಬಂದ ಹೊರತಾಗಿಯೂ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 200 ಅಂಕಗಳ ಮುನ್ನಡೆಯನ್ನು ದಾಖಲಿಸಿತು.
ಕಳೆದ ಮೂರು ದಿನಗಳ ಕಾಲ ದಾಖಲಿಸಿದ ನಿರಂತರ ಏರಿಕೆಯಲ್ಲಿ ಸೆನ್ಸೆಕ್ಸ್ ಒಟ್ಟು 659.09 ಅಂಕಗಳನ್ನು ಸಂಪಾದಿಸಿತ್ತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 2.49 ಅಂಕಗಳ ನಷ್ಟದೊಂದಿಗೆ 35,157. 87 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 2.49 ಅಂಕಗಳ ನಷ್ಟದೊಂದಿಗೆ 10,727.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್‌ಸಿಎಲ್ ಟೆಕ್, ಕೋಟಕ್ ಮಹೀಂದ್ರ, ಎಚ್ ಡಿ ಎಫ್ ಸಿ, ಮಾರುತಿ ಸುಜುಕಿ , ಟಾಟಾ ಮೋಟರ್ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಕೋಟಕ್ ಮಹೀಂದ್ರ,ಝೀ ಎಂಟರ್‌ಟೇನ್‌ಮೆಂಟ್, ಬಜಾಜ್ ಆಟೋ, ಸಿಪ್ಲಾ, ರಿಲಯನ್ಸ್. ಟಾಪ್ ಲೂಸರ್‌ಗಳು: ಎಚ್‌ಸಿಎಲ್ ಟೆಕ್, ವೇದಾಂತ, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರ, ಕೋಲ್ ಇಂಡಿಯಾ.
ಡಾಲರ್ ಎದುರು ಇಂದು ರೂಪಾಯಿ ನಾಲ್ಕು ಪೈಸೆ ಕುಸಿದು 66.70 ರೂ ಮಟ್ಟಕ್ಕೆ ಇಳಿಯಿತು.