ಮುಂಬಯಿ : ಕಂಪೆನಿಗಳ ಜೂನ್ ತ್ತೈಮಾಸಿಕ ಫಲಿತಾಂಶಗಳು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಮೆಟಲ್, ರಿಯಲ್ಟಿ, ಕ್ಯಾಪಿಟಲ್ ಗೂಡ್ಸ್ ಶೇರುಗಳ ಭರಾಟೆಯ ಖರೀದಿಯನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು ಸಾರ್ವಕಾಲಿಕ ದಾಖಲೆಯ ಎತ್ತರದಲ್ಲಿ ಕೊನೆಗೊಳಿಸಿದವು.
106.50 ಅಂಕಗಳ ಏರಿಕೆಯನ್ನು ದಾಖಲಿಸಿದ ಸೆನ್ಸೆಕ್ಸ್ ಆ ಮೂಲಕ 36,825.10 ಅಂಕಗಳ ಸಾರ್ವಕಾಲಿಕ ದಾಖಲೆಯ ಎತ್ತರದ ಮಟ್ಟವನ್ನು ತಲುಪುವ ಸಾಧನೆ ಮಾಡಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 49.55 ಅಂಕಗಳ ಮುನ್ನಡೆಯನ್ನು ದಾಖಲಿಸಿ ಸಾರ್ವಕಾಲಿಕ ಮಟ್ಟದ 11,134.30 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಎಲ್ ಆ್ಯಂಡ್ ಟಿ, ಏಶ್ಯನ್ ಪೇಂಟ್, ವೇದಾಂತ, ಟಾಟಾ ಸ್ಟೀಲ್, ಕೋಲ್ ಇಂಡಿಯಾ, ಇನ್‌ಫೋಸಿಸ್, ಮಹೀಂದ್ರ, ಅದಾನಿ ಪೋರ್ಟ್, ಮಾರುತಿ ಸುಜುಕಿ, ಎಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಪವರ್ ಗ್ರಿಡ್, ಒಎನ್‌ಜಿಸಿ, ಟಾಟಾ ಮೋಟರ್, ಸನ್ ಫಾರ್ಮಾ, ಐಟಿಸಿ, ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಎಸ್ ಬಿ ಐ ಶೇರುಗಲು ಶೇ.3.6ರಷ್ಟು ಏರಿದವು.
ಸಿಮೆಂಟ್ ರಂಗದ ದಿಗ್ಗಜ ಎಸಿಸಿ ಕಂಪೆನಿಯ ಶೇರುಗಳು ಇಂದು ಶೇರು 12.86ರಷ್ಟು ಏರಿರುವುದು ಗಮನಾರ್ಹವೆನಿಸಿತು. ಜೂನ್ ತ್ತೈಮಾಸಿಕದಲ್ಲಿ ಕಂಪೆನಿಯ ನಿವ್ವಳ ಲಾಭ 329 ಕೋಟಿ ರೂ. ಆಗಿದೆ.