ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದಿನ ಮಂಗಳವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಹಾಗೂ ಜೀವಮಾನದ ಎತ್ತರವನ್ನು ಕಂಡ ಸಾಧನೆ ಮಾಡಿರುವುದು ವಿಶೇಷವೆನಿಸಿತು.
ನಿರಂತರ ಎರಡನೇ ದಿನವೂ ಗೆಲುವಿನ ಓಟದಲ್ಲಿ ತೊಡಗಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 31.45 ಅಂಕಗಳ ಮುನ್ನಡೆಯೊಂದಿಗೆ 31,747.09 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿಯಲ್ಲಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 15 ಅಂಕಗಳ ಮುನ್ನಡೆಯನ್ನು ಕಂಡು ದಿನದ ವಹಿವಾಟನ್ನು 9,786.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ದಿನದ ವಹಿವಾಟಿನ ಮಧ್ಯೆ ಸೆನ್ಸೆಕ್ಸ್ 31,885.11 ಅಂಕಗಳ ಎತ್ತರವನ್ನೂ ನಿಫ್ಟಿ 9,380.05 ಅಂಕಗಳ ಎತ್ತರವನ್ನೂ ದಾಖಲಿಸಿದುದು ಇಂದಿನ ವಿಶೇಷವಾಗಿದೆ.
ಇಂದಿನ ವಹಿವಾಟಿನಲ್ಲಿ ಒಟ್ಟು 3,072 ಶೇರುಗಳು ವಹಿವಾಟಿಗೆ ಒಳಪಟ್ಟವು. 1,269 ಶೇರುಗಳು ಮುನ್ನಡೆ ಕಂಡವು; 1,638 ಶೇರುಗಳು ಹಿನ್ನಡೆಗೆ ಗುರಿಯಾದವು; 165 ಶೇರುಗಳ ಇದ್ದಲ್ಲೇ ಉಳಿದವು.
ಇಂದು ಟಾಪ್ ಗೇನರ್‌ಗಳ ಪಟ್ಟಿಯಲ್ಲಿ ಬಜಾಜ್ ಆಟೋ, ಟಾಟಾ ಮೋಟರ್, ಎನ್‌ಟಿಪಿಸಿ, ಮಹೀಂದ್ರ ಮತ್ತು ಇನ್‌ಫೋಸಿಸ್ ಶೇರುಗಳು ಕಂಡು ಬಂದವು. ಇದೇ ವೇಳೆ ಭಾರ್ತಿ ಏರ್‌ಟೆಲ್, ಸಿಪ್ಲಾ, ವಿಪ್ರೋ, ಕೋಲ್ ಇಂಡಿಯಾ, ಒಎನ್‌ಜಿಸಿ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.