ಮುಂಬಯಿ : ದಿನದ ಉದ್ದಕ್ಕೂ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು, ನಿರಂತರ ಮೂರನೇ ದಿನದ ಏರಿಕೆಯಾಗಿ, 47 ಅಂಕಗಳ ಅಲ್ಪ ಮುನ್ನಡೆಯೊಂದಿಗೆ 35,739.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಸಾಫ್ಟ್ ವೇರ್ ರಫು ಮತ್ತು ಹೆಲ್ತ್ ಕೇರ್ ಕಂಪೆನಿಗಳ ಶೇರುಗಳ ಇಂದು ವಿಜೃಂಭಿಸಿದವು.
ಈ ವರ್ಷ ಎಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.4.9ರಷ್ಟು ಹಿಗ್ಗಿರುವುದು ಶೇರು ಪೇಟೆಗೆ ಸಮಾಧಾನ ತಂದಿತು. ಆದರೆ ಚಿಲ್ಲರೆ ಹಣದುಬ್ಬರ ಮೇ ತಿಂಗಳಲ್ಲಿ ಶೇ.4.87ರ ಮಟ್ಟಕ್ಕೆ ಏರಿರುವುದು ಕಳವಳದ ಸಂಗತಿ ಎನಿಸಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 248.85 ಅಂಕಗಳನ್ನು ಗಳಿಸಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 13.85 ಅಂಕಗಳ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು 10,856.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ದೇಶೀಯ ಹೂಡಿಕೆದಾರ ಸಂಸ್ಥೆಗಳು ನಿನ್ನೆ ಮಂಗಳವಾರ 1,327.45 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದವು; ವಿದೇಶೀ ಹೂಡಿಕೆದಾರ ಸಂಸ್ಥೆಗಳು 1,168.88 ಕೋಟಿ ರೂ. ಶೇರುಗಳನ್ನು ಮಾರಿದ್ದರು.