ಮುಂಬಯಿ : ಕಳೆದ ಮೂರು ದಿನಗಳಿಂದ ಸೋಲಿನ ಹಾದಿಯನ್ನು ಕ್ರಮಿಸುತ್ತಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 373.06 ಅಂಕಗಳ ಭರ್ಜರಿ ಜಿಗಿತದೊಂದಿಗೆ 35,354.08 ಅಂಕಗಳ ಮಟ್ಟದಲ್ಲಿ ಹೊಸ ಭರವಸೆಯೊಂದಿಗೆ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 101.80 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 10,628.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ಉತ್ತಮ ಚೇತರಿಕೆಯನ್ನು ಕಂಡು 70.68ರ ಮಟ್ಟದಲ್ಲಿ ಸ್ಥಿರತೆಯನ್ನು ಕಂಡಿರುವುದು, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಯುತ್ತಿರುವುದು ಮತ್ತು ದೇಶೀಯ ಹೂಡಿಕೆದಾರ ಸಂಸ್ಥೆಗಳು ಮುಂಚೂಣಿ ಶೇರುಗಳ ವ್ಯಾಪಕ ಖರೀದಿ ನಡೆಸಿರುವುದು ಮುಂಬಯಿ ಶೇರು ಪೇಟೆಯ ಇಂದಿನ ಜಿಗಿತಕ್ಕೆ ಕಾರಣವಾಗಿದೆ.
ಇಂದಿನ ವಹಿವಾಟಿನಲ್ಲಿ ಹೀರೋ ಮೋಟೋ ಕಾರ್ಪ್, ಎಚ್‌ಯುಎಲ್, ವಿಪ್ರೋ, ಏಶ್ಯನ್ ಪೇಂಟ್ಸ್, ಎಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಆಟೋ, ಎಚ್ ಡಿ ಎಫ್ ಸಿ ಬ್ಯಾಂಕ್, ಐಟಿಸಿ, ಭಾರ್ತಿ ಏರ್‌ಟೆಲ್ ಮುಂತಾದ ಶೇರುಗಳು ಇಂದು ಶೇ.5.02ರ ಏರಿಕೆಯನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,780 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,063 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,522 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 195 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.