ಮುಂಬಯಿ : ಏರುತ್ತಿರುವ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ, ಕುಸಿಯುತ್ತಿರುವ ರೂಪಾಯಿ ದರ ಇತ್ಯಾದಿ ಬೆದರಿಕೆಗಳಿಗೆ ನಿರಂತರವಾಗಿ ನಲುಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಕಳೆದ 19 ತಿಂಗಳಲ್ಲೇ ಕಂಡಿರುವ ಗರಿಷ್ಠ rally ಯಾಗಿ ಇಂದು ಶುಕ್ರವಾರದ ವಹಿವಾಟನ್ನು 732.43 ಅಂಕಗಳ ಭರ್ಜರಿ ಜಿಗಿತದೊಂದಿಗೆ 34,733.58 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 237.85 ಅಂಕಗಳ ಏರಿಕೆಯೊಂದಿಗೆ 10,472.50 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇಂದಿನ ವಹಿವಾಟಿನ ನಡುವೆ ಡಾಲರ್ ಎದುರು ರೂಪಾಯಿ 53 ಪೈಸೆಯ ದೃಢತೆಯನ್ನು ಹೆಚ್ಚಿಸಿಕೊಂಡು 73.59 ರೂ. ಮಟ್ಟದಲ್ಲಿ ವ್ಯವಹರಿಸಿತು. ಶೇರು ಪೇಟೆಗೆ ರೂಪಾಯಿ ಚೇತರಿಕೆ ಹುಮ್ಮಸ್ಸು ನೀಡಿತು.
ಇಂದಿನ ವಹಿವಾಟಿನಲ್ಲಿ ಆಟೋ, ರಿಯಲ್ಟಿ, ಮೆಟಲ್, ಆಯಿಲ್ ಆ್ಯಂಡ್ ಗ್ಯಾಸ್, ಎಫ್ಎಂಸಿಜಿ, ಬ್ಯಾಂಕಿಂಗ್, ಪವರ್, ಇನ್‌ಫ್ರಾಸ್ಟ್ರಕ್ಚರ್, ಐಟಿ, ಆಟೋ ಮತ್ತು ಕ್ಯಾಪಿಟಲ್ ಗೂಡ್ಸ್ ಶೇರುಗಳು ಉತ್ತಮ ಖರೀದಿಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,818 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 2,043 ಶೇರುಗಳ ಮುನ್ನಡೆ ಸಾಧಿಸಿದವು; 628 ಶೇರುಗಳು ಹಿನ್ನಡೆಗೆ ಗುರಿಯಾದವು; 147 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.