ಮುಂಬಯಿ : ನಿರಂತರ ಆರನೇ ದಿನದ ವಹಿವಾಟಿನಲ್ಲಿ ಇಂದು ಸೋಮವಾರ ಏರುಗತಿಯನ್ನು ಕಂಡ ಹೊರತಾಗಿಯೂ ಮುಂಬಯಿ ಶೇರು ಪೇಟೆ ದಿನದ ವಹಿವಾಟನ್ನು 70.75 ಅಂಕಗಳ ಅಲ್ಪ ಏರಿಕೆಯೊಂದಿಗೆ 38,095.07 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಭಾರತೀಯ ಶೇರು ಮಾರುಕಟ್ಟೆಗಳತ್ತ ವಿದೇಶಿ ಬಂಡವಾಳದ ಒಳ ಹರಿವು ನಿರಂತರವಾಗಿ ಹೆಚ್ಚುತ್ತಿರುವುದು, ಆದರಿಂದಾಗಿ ದೇಶದ ವಾಣಿಜ್ಯ ಕೊರತೆ ಕಡಿಮೆಯಾಗುತ್ತಿರುವುದು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಧನಾತ್ಮಕತೆ ತೋರಿಬಂದಿರುವುದು – ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆಯಲ್ಲಿ ನಿರಂತರ ತೇಜಿ ಕಂಡು ಬರುತ್ತಿದೆ.
ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಇಂದು 35.35 ಅಂಕಗಳ ಮುನ್ನಡೆಯೊಂದಿಗೆ 11,462.20 ಅಂಕಗಳ ಮಟ್ಟಕ್ಕೇರಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇಂದಿನ ಟಾಪ್ ಗೇನರ್‌ನಲ್ಲಿ ಬಜಾಜ್ ಫಿನಾನ್ಸ್ ಶೇ.2.84ರ ಏರಿಕೆಯೊಂದಿಗೆ ಅಗ್ರ ಸ್ಥಾನ ಪಡೆಯಿತು. ಉಳಿದಂತೆ ಪವರ್ ಗ್ರಿಡ್, ಆರ್‌ಐಎಲ್, ಎಕ್ಸಿಸ್ ಬ್ಯಾಂಕ್, ಟಾಟಾ ಮೋಟರ್, ಎನ್‌ಟಿಪಿಸಿ, ಎಚ್ ಡಿ ಎಫ್ ಸಿ ಬ್ಯಾಂಕ್, ಏಶ್ಯನ್ ಪೇಂಟ್, ಐಸಿಐಸಿಐ ಬ್ಯಾಂಕ್, ಐಟಿಸಿ, ಸನ್ ಫಾರ್ಮಾ ಮತ್ತು ಎಸ್ ಬ್ಯಾಂಕ್ ಶೇರುಗಳು ಶೇ.2.29ರ ಏರಿಕೆಯನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,881 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,146 ಶೇರುಗಳು ಮುನ್ನಡೆ ಸಾಧಿಸಿದವು; 1,537 ಶೇರುಗಳು ಹಿನ್ನಡೆಗೆ ಗುರಿಯಾದವು; 198 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.