ಮುಂಬಯಿ : ನಿರಂತರ ನಾಲ್ಕನೇ ದಿನ ಏರುಗತಿಯನ್ನು ಕಾಯ್ದುಕೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 267 ಅಂಕಗಳ ಜಿಗಿತವನ್ನು ಸಾಧಿಸಿತು.
ಇನ್‌ಫೋಸಿಸ್ ಕಂಪೆನಿಯ ಎರಡನೇ ತ್ತೈಮಾಸಿಕ ಫಲಿತಾಂಶ ಉತ್ತಮ ಇರುವುದು ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕತೆ ತೋರಿ ಬಂದಿರುವುದು ಮುಂಬಯಿ ಶೇರು ಪೇಟೆಯ ಇಂದಿನ ತೇಜಿಗೆ ಕಾರಣವಾಯಿತು.
ಬೆಳಗ್ಗೆ 11 ಗಂಟೆಯ ವೇಳೆಗೆ ಸೆನ್ಸೆಕ್ಸ್ 189.47 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 35,351.95 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 41.50 ಅಂಕಗಳ ಏರಿಕೆಯೊಂದಿಗೆ 10,626.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 6 ಪೈಸೆಯಷ್ಟು ಶಕ್ತಿಯುತವಾಗಿ 73.42 ರೂ. ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಎಸ್ ಬ್ಯಾಂಕ್, ಅದಾನಿ ಪೋರ್ಟ್, ಎಚ್‌ಯುಎಲ್, ವೇದಾಂತ, ಇಂಡಸ್ ಇಂಡ್ ಬ್ಯಾಂಕ್, ಮಾರುತಿ ಸುಜುಕಿ, ಟಾಟಾ ಮೋಟರ್, ಎಚ್ ಡಿ ಎಫ್ ಸಿ, ಐಟಿಸಿ , ಸನ್ ಫಾರ್ಮಾ ಶೇರುಗಳು ಶೇ.1.35ರ ಏರಿಕೆಯನ್ನು ಕಂಡವು.
ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಇಂದು ಜಪಾನಿನ ನಿಕ್ಕಿ ಶೇ.1.19, ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಶೇ. 0.10, ತೈವಾನ್ ಶೇ.0.80 ಏರಿಕೆಯನ್ನು ಕಂಡವು. ಹಾಂಕಾಂಗ್ ಹಣಕಾಸು ಮಾರುಕಟ್ಟೆಗೆ ಇಂದು ರಜೆ.