ಮುಂಬಯಿ : ದಿಟ್ಟತನದ ಆರ್ಥಿಕ ಸುಧಾರಣಾ ಕ್ರಮಗಳಿಗೆ ತಾನು ಹಿಂಜರಿಯುವುದಿಲ್ಲ ಎಂದು ಕೇಂದ್ರ ಸರಕಾರ ಏರ್ ಇಂಡಿಯಾ ಬಂಡವಾಳ ಹಿಂದೆಗೆತದ ನಿರ್ಧಾರದ ಮೂಲಕ ತೋರಿಸಿಕೊಟ್ಟಿರುವುದನ್ನು ಮುಂಬಯಿ ಶೇರು ಮಾರುಕಟ್ಟೆ ಸ್ವಾಗತಿಸಿದೆ. ಅಂತೆಯೇ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 160 ಅಂಕಗಳ ಜಿಗಿತವನ್ನು ದಾಖಲಿಸಿದೆ.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 205.57 ಅಂಕಗಳ ಮುನ್ನಡೆಯೊಂದಿಗೆ 31,039.89 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ಸೂಚ್ಯಂಕ ನಿಫ್ಟಿ 66.15 ಅಂಕಗಳ ಮುನ್ನಡೆಯೊಂದಿಗೆ 9,557.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ಆರಂಭಿಕ ವಹವಾಟಿನಲ್ಲಿ ಈಶರ್ ಮೋಟರ್, ಎಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ರಿಲಯನ್ಸ್ ಮತ್ತು ಇನ್‌ಫೋಸಿಸ್ ಶೇರುಗಳು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದವು.
ಸನ್ ಫಾರ್ಮಾ, ವಿಪ್ರೋ, ಅರಬಿಂದೋ ಫಾರ್ಮಾ, ಕೋಟಕ್ ಮಹಿಂದ್ರ ಮತ್ತು ಲೂಪಿನ್ ಶೇರುಗಳು ಟಾಪ್ ಲೂಸರ್ ಎನಿಸಿದವು.
ನಿನ್ನೆ ಬುಧವಾರದ ವಹಿವಾಟಿನ ಅಂತ್ಯಕ್ಕೆ ವಾಲ್ ಸ್ಟ್ರೀಟ್ ಶೇರು ಮಾರುಕಟ್ಟೆ ಉತ್ತಮ ಮುನ್ನಡೆಯನ್ನು ದಾಖಲಿಸಿದ ಕಾರಣ ಇಂದು ಏಶ್ಯನ್ ಶೇರು ಪೇಟೆಗಳು ಆರಂಭಿಕ ವಹಿವಾಟಿನಲ್ಲಿ ತೇಜಿಯಲ್ಲಿದ್ದವು.