ಮುಂಬಯಿ : ಶುಕ್ರವಾರದ ಇಂದಿನ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 100ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು. ಹಾಗಿದ್ದರೂ ಒಎನ್‌ಜಿಸಿ ಶೇರು ಶೇ.6ರ ಜಿಗಿತವನ್ನು ಕಂಡಿತು.
ಏರುತ್ತಿರುವ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮತ್ತು ಹೆಚ್ಚುತ್ತಿರುವ ವಿದೇಶಿ ಬಂಡವಾಳದ ಹೊರ ಹರಿವಿನ ನಡುವೆ ಇಂದು ಮೆಟಲ್, ಹೆಲ್ತ್ ಕೇರ್, ಬ್ಯಾಂಕಿಂಗ್ ಮತ್ತು ಆಟೋ ರಂಗದ ಶೇರುಗಳು ವ್ಯಾಪಕ ಮಾರಾಟ ಒತ್ತಡಕ್ಕೆ ಗುರಿಯಾದದ್ದೇ ಸೆನ್ಸೆಕ್ಸ್ ಹಿನ್ನಡೆಗೆ ಕಾರಣವಾಯಿತು. ಮೇಲಾಗಿ ಏಶ್ಯನ್ ಶೇರು ಪೇಟೆಗಳಲ್ಲಿ ನಿಸ್ತೇಜ ವಾತಾವರಣ ಇದ್ದುದು ಕೂಡ ಪರಿಣಾಮ ಬೀರಿತು.
ಬೆಳಗ್ಗೆ 11.45ರ ಹೊತ್ತಿಗೆ ಸೆನ್ಸೆಕ್ಸ್ 231.30 ಅಂಕಗಳ ನಷ್ಟದೊಂದಿಗೆ 35,645.21 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 81.10 ಅಂಕಗಳ ನಷ್ಟದೊಂದಿಗೆ 10,664.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಒಎನ್‌ಜಿಸಿ, ಎನ್‌ಟಿಪಿಸಿ, ಬಿಪಿಸಿಎಲ್, ಪವರ್ ಗ್ರಿಡ್, ಕೋಲ್ ಇಂಡಿಯಾ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದು ಟಾಪ್ ಗೇನರ್ ಎನಿಸಿಕೊಂಡವು.
ಡಾಲರ್ ಎದುರು ರೂಪಾಯಿ ಇಂದು ಆರಂಭಿಕ ವಹಿವಾಟಿನಲ್ಲಿ 17 ಪೈಸೆಯ ಕುಸಿತವನ್ನು ಕಂಡು 71.33 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.