ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ತೋರಿ ಬಂದ ಮಿಶ್ರ ಪ್ರತಿಕ್ರಿಯೆ ಮತ್ತು ಉನ್ನತ ಮಟ್ಟದಲ್ಲಿ ನಡೆದ ಲಾಭ ನಗದೀಕರಣದ ಫಲವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 23.89 ಅಂಕಗಳ ಅಲ್ಪ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 36,194.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 18.05 ಅಂಕಗಳ ಮುನ್ನಡೆಯನ್ನು ಪಡೆದು ದಿನದ ವಹಿವಾಟನ್ನು 10,786.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಈ ವಾರದಲ್ಲಿ ಸೆನ್ಸೆಕ್ಸ್ 1,213.8 ಅಂಕ ಗಳಿಸಿದೆಯಾದರೆ ನಿಫ್ಟಿ 350 ಅಂಕ ಗಳಿಸಿರುವುದು ಗಮನಾರ್ಹವಾಗಿದೆ.
ಇಂದಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ವಿಪ್ರೋ, ಕೋಟಕ್ ಬ್ಯಾಂಕ್, ಮಹೀಂದ್ರ, ಸನ್ ಫಾರ್ಮಾ, ಮಾರುತಿ, ಎಚ್ ಡಿ ಎಫ್ ಸಿ, ಹೀರೋ ಮೋಟೋ ಕಾರ್ಪ್, ಇನ್‌ಫೋಸಿಸ್, ಟಿಸಿಎಸ್, ಲಾರ್ಸನ್, ಬಜಾಜ್ ಆಟೋ ಮತ್ತು ಎಚ್‌ಯುಎಲ್ ಶೇರುಗಳು ಶೇ.6ರಷ್ಟು ಏರುವ ಮೂಲಕ ಟಾಪ್ ಗೇನರ್ ಎನಿಸಿಕೊಂಡವು.
ಡಾಲರ್ ಎದುರು ರೂಪಾಯಿ ಇಂದು ನಿರಂತರ ನಾಲ್ಕನೇ ದಿನದ ಏರಿಕೆಯಾಗಿ 13 ಪೈಸೆಗಳ ಜಿಗಿತವನ್ನು ಕಂಡು 69.78 ರೂ. ಮಟ್ಟ ತಲುಪಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,760 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,300 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,303 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 157 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.