ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 10,000 ಅಂಕಗಳ ಐತಿಹಾಸಿಕ ಗಡಿಯನ್ನು ದಾಟಿ ಮುನ್ನುಗ್ಗಿದ್ದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ, ಇಂದು ಮಂಗಳವಾರದ ವಹಿವಾಟನ್ನು 1.85 ಅಂಕಗಳ ನಷ್ಟದೊಂದಿಗೆ 9,964.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸುವ ಮೂಲಕ ನಿರಾಶೆ ಹುಟ್ಟಿಸಿತು.
ಇದೇ ರೀತಿಯ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಹೊಸ ಎತ್ತರವನ್ನು ತಲುಪಿ ದಾಖಲಿಸಿದ ಸಾಧನೆಯಿಂದ ಹಿಂದೆ ಸರಿದು ದಿನದ ವಹಿವಾಟನ್ನು 17.60 ಅಂಕಗಳ ನಷ್ಟದಲ್ಲಿ 32,228.27 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಂಪೆನಿಗಳಿಂದ ಉತ್ತಮ ತ್ತೈಮಾಸಿಕ ಫಲಿತಾಂಶಗಳು ಹೊರ ಬರುತ್ತಿರುವ ಹೊರತಾಗಿಯೂ ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದದ್ದೇ ಇಂದಿನ ಹಿನ್ನಡೆಗೆ ಕಾರಣವಾಯಿತೆಂದು ತಿಳಿಯಲಾಗಿದೆ.
ಇಂದು ವಹಿವಾಟಿಗೆ ಒಳಪಟ್ಟಿದ್ದ ಶೇರುಗಳ ಪೈಕಿ 1,193 ಶೇರುಗಳು ಮುನ್ನಡೆ ಸಾಧಿಸಿದರೆ 1,480 ಶೇರುಗಳು ಹಿನ್ನಡೆಗೆ ಗುರಿಯಾದವು; 169 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಎಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ವೇದಾಂತ ಮತ್ತು ಇಂಡಿಯಾಬುಲ್ಸ್ ಹೌಸಿಂಗ್ ಶೇರುಗಳು ಟಾಪ್ ಗೇನರ್ ಪಟ್ಟಿಯಲ್ಲಿ ಕಂಡು ಬಂದವು; ವ್ಯತಿರಿಕ್ತವಾಗಿ ಲೂಪಿನ್, ಟಾಟಾ ಮೋಟರ್ ಡಿವಿಆರ್, ಝೀ ಎಂಟರ್‌ಟೇನ್‌ಮೆಂಟ್, ಅಲ್‌ಟ್ರಾ ಟೆಕ್ ಸಿಮೆಂಟ್ ಶೇರುಗಳು ಟಾಪ್ ಲೂಸರ್ ಪಟ್ಟಿಯಲ್ಲಿ ಕಾಣಿಸಿದವು.
ವೇದಾಂತ ಶೇರುಗಳು ಇಂದು ಬೆಳಗ್ಗೆ ಶೇ.4ರಷ್ಟು ಏರಿ ಗಮನ ಸೆಳೆದವು.