ಮುಂಬಯಿ : ಜಾಗತಿಕ ಶೇರು ಪೇಟೆಯಲ್ಲಿನ ನಿರುತ್ಸಾಹದ ಹೊರತಾಗಿಯೂ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು,ನಿರಂತರ ಮೂರನೇ ದಿನದ ಏರಿಕೆಯಾಗಿ, 103.03 ಅಂಕಗಳ ಮುನ್ನಡೆಯೊಂದಿಗೆ, ದಿನದ ವಹಿವಾಟನ್ನು 35,404.83 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿದೆ.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 300.94 ಅಂಕಗಳ ಏರಿಕೆಯನ್ನು ಗಳಿಸಿತ್ತು. ಡಾಲರ್ ಎದುರು ರೂಪಾಯಿ ವಿನಿಮಯ ದರ 15 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವ ಕಾರಣ ಐಟಿ ಶೇರುಗಳು ಪರಿಸ್ಥಿತಿಯ ಲಾಭಪಡೆದು ಉತ್ತಮ ಮುನ್ನಡೆ ಕಂಡವು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.90 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡು ದಿನದ ವಹಿವಾಟನ್ನು 10,741.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿನ್ನೆ ಮಂಗಳವಾರ 923.25 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದಾರೆ. ವ್ಯತಿರಿಕ್ತವಾಗಿ ವಿದೇಶಿ ಹೂಡಿಕೆದಾರರು 97.15 ಕೋಟಿ ರೂ ಶೇರುಗಳನ್ನು ಮಾರಿದ್ದಾರೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ 2104ರ ಬಳಿಕ ಇದೇ ಮೊದಲ ಬಾರಿಗೆ ಬ್ಯಾರಲ್‌ಗೆ 77.07 ಡಾಲರ್‌ಗೆ ಏರಿರುವುದು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಕಳವಳಕ್ಕೆ ಕಾರಣವಾಗಿದೆ.