ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಕಾರಣ ಕೊನೇ ತಾಸಿನಲ್ಲಿ ನಡೆದ ಭರಾಟೆಯ ಮಾರಾಟದಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 61.16 ಅಂಕಗಳ ನಷ್ಟದೊಂದಿಗೆ 33,856.78 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಆದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ನಿರಂತರ ಎರಡನೇ ದಿನವಾಗಿ ಇಂದಿನ ವಹಿವಾಟನ್ನು 5.45 ಅಂಕಗಳ ಏರಿಕೆಯೊಂದಿಗೆ 10,426.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಮುಖ್ಯ ವಿದ್ಯಮಾನವಾಗಿ ಟಿಸಿಎಸ್ ಶೇರು ಶೇ.5.22ರಷ್ಟು ಕುಸಿದು 2,892.45 ರೂ.ಗೆ ಜಾರಿತು. ಟಿಸಿಎಸ್ ನಲ್ಲಿನ ತನ್ನ ಪಾಲಿನಲ್ಲಿ ಸ್ವಲ್ಪಾಂಶವನ್ನು ಮಾರಿ 8,200 ಕೋಟಿ ರೂ. ಎತ್ತಲು ಟಾಟಾ ಸನ್ಸ್ ಉದ್ದೇಶಿಸಿರುವ ಪರಿಣಾಮವಾಗಿ ಟಿಸಿಎಸ್ ಶೇರು ಕುಸಿಯಿತು.
ಚಿಲ್ಲರೆ ಹಣದುಬ್ಬರ ಶೇ.4.4ಕ್ಕೆ ಕುಸಿದಿರುವುದು ಮತ್ತು ಕೈಗಾರಿಕಾ ಉತ್ಪಾದನೆ ಶೇ.7.5ರ ಮಟ್ಟಕ್ಕೆ ಹಿಗ್ಗಿರುವುದು ಶೇರು ಮಾರುಕಟ್ಟೆಗೆ ಬೆಳಗ್ಗೆ ಸ್ವಲ್ಪ ಮಟ್ಟಿನ ಬೂಸ್ಟ್ ಕೊಟ್ಟಿತು.
ಇಂದು ಒಟ್ಟು 2,850 ಕಂಪೆನಿಯ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,705 ಶೇರುಗಳು ಮುನ್ನಡೆ ಸಾಧಿಸಿದವು; 993 ಶೇರುಗಳು ಹಿನ್ನಡೆಗೆ ಗುರಿಯಾದವು; 152ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.