ಮುಂಬಯಿ : ವಿದೇಶಿ ಬಂಡವಾಳದ ನಿರಂತರ ಹೊರ ಹರಿವಿನಿಂದ ಕಳವಳಗೊಂಡಿರುವ ಮುಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ, ಹೂಡಿಕೆದಾರರು ಕೈಗೊಂಡ ಲಾಭನಗದೀಕರಣದ ಮಾರಾಟದ ಪರಿಣಾಮವಾಗಿ, ಇಂದು ಗುರುವಾರದ ವಹಿವಾಟನ್ನು 115 ಅಂಕಗಳ ನಷ್ಟದೊಂದಿಗೆ 35,432.39 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಕುಸಿತದ ಹೊರತಾಗಿಯೂ ರಿಲಯನ್ಸ್ ಇಂಡಸ್ಟ್ರೀಸ್ ಶೇರು ಇಂದು ಕೂಡ ತನ್ನ ಏರುಗತಿಯನ್ನು ಮುಂದುವರಿಸಿ 1,031.10 ರೂ. ಎತ್ತರಕ್ಕೆ ತಲುಪಿ ಶೇ.1.09ರ ಏರಿಕೆಯನ್ನು ದಾಖಲಿಸಿತು.
ಅಮೆರಿಕ – ಚೀನ ನಡುವಿನ ವಾಣಿಜ್ಯ ಬಿಕ್ಕಟ್ಟು ತಾರಕಕ್ಕೇರಿ ಅನಿಶ್ಚಿತತೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಏಶ್ಯ ಮತ್ತು ಐರೋಪ್ಯ ಶೇರು ಮಾರುಕಟ್ಟೆಗಳು ಇಂದು ಕೆಳಮಟ್ಟದಲ್ಲಿ ವ್ಯವಹರಿಸಿದವು.
ಇಂದಿನ ವಹಿವಾಟಿನಲ್ಲಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 30.95 ಅಂಕಗಳ ನಷ್ಟಕ್ಕೆ ಗುರಿಯಾಗಿ 10,741.10 ಅಂಕಗಳ ಮಟ್ಟಕ್ಕೆ ಇಳಿದು ದಿನದ ವಹಿವಾಟನ್ನು ಕೊನೆಗೊಳಿಸಿತು.
ನಿನ್ನೆ ಬುಧವಾರ ವಿದೇಶಿ ಹೂಡಿಕೆದಾರ ಸಂಸ್ಥೆಗಳು 1,442.61 ಕೋಟಿ ರೂ.ಶೇರು ಮಾರಿದ್ದವು; ಆದರೆ ದೇಶೀಯ ಹೂಡಿಕೆ ಸಂಸ್ಥೆಗಳು 1,473.65 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದವು.