ಮುಂಬಯಿ : ಕಳೆದ ಎರಡು ದಿನಗಳ ವಹಿವಾಟಿನಲ್ಲಿ 677.51 ಅಂಕಗಳನ್ನು ಸಂಪಾದಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟಿನಲ್ಲಿ 505 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 37,585.51 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 137.45 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,366.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಜಾಗತಿಕ ವಾಣಿಜ್ಯ ಸಮರ ತೀವ್ರಗೊಳ್ಳುವ ಭೀತಿ, ಡಾಲರ್ ಎದುರು ರೂಪಾಯಿಯ ನಿರಂತರ ಕುಸಿತ, ಲಾಭ ನಗದೀಕರಣ, ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿನ ದೌರ್ಬಲ್ಯ ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆ ಇಂದು ತೀವ್ರ ಕುಸಿತಕ್ಕೆ ಗುರಿಯಾಯಿತು.
ಕಳೆದ ಶುಕ್ರವಾರ ಸರಕಾರ ರೂಪಾಯಿ ಕುಸಿತ ತಡೆಗೆ ಹಲವಾರು ಉಪಕ್ರಮಗಳನ್ನು ಘೋಷಿಸಿದ್ದ ಹೊರತಾಗಿಯೂ ಇಂದು ಡಾಲರ್ ಎದುರು ರೂಪಾಯಿ 72ರ ಗಡಿ ದಾಟಿ, 72.69 ರೂ. ಮಟ್ಟಕ್ಕೆ ಕುಸಿಯಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,914 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,282 ಶೇರುಗಳು ಮುನ್ನಡೆ ಸಾಧಿಸಿದವು; 1,441 ಶೇರುಗಳು ಹಿನ್ನಡೆಗೆ ಗುರಿಯಾದವು; 191 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.