ಮುಂಬಯಿ : ದೇಶದ ಆರ್ಥಿಕತೆಯ ಸ್ಥೂಲ ಅಂಕಿ ಅಂಶಗಳು ಆಶಾದಾಯಕವಾಗಿರುವ ಹೊರತಾಗಿಯೂ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ, ಸಾಗರೋತ್ತರ ಮಾರುಕಟ್ಟೆಗಳಲ್ಲಿನ ಮಿಶ್ರ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ, 44.58 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ನಿನ್ನೆ ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 610.80 ಅಂಕಗಳ ಸೊಗಸಾದ ಏರಿಕೆಯನ್ನು ದಾಖಲಿಸಿತ್ತು.
ಬೆಳಗ್ಗೆ 10.50 ರ ಹೊತ್ತಿಗೆ ಸೆನ್ಸೆಕ್ಸ್ 127.22 ಅಂಕಗಳ ಮುನ್ನಡೆಯನ್ನು ಸಾಧಿಸಿ 34,045.16 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 46.60 ಅಂಕಗಳ ಏರಿಕೆಯನ್ನು ದಾಖಲಿಸಿ 10,468.00 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಟಿಸಿಎಸ್, ಎಸ್‌ಬಿಐ, ಟಾಟಾ ಸ್ಟೀಲ್, ಇನ್‌ಫೋಸಿಸ್, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 2,316 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟಿದ್ದವು; 1,594 ಶೇರುಗಳು ಮುನ್ನಡೆ ಸಾಧಿಸಿದ್ದವು; 633 ಶೇರುಗಳ ಹಿನ್ನಡೆಗೆ ಗುರಿಯಾಗಿದ್ದವು; 89 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ವಿನಿಮಯ ದರ 9 ಪೈಸೆಯಷ್ಟು ಕುಸಿದು 64.95 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.